ಹು-ಧಾ ಅಂಗವಿಕಲರ ಸಂಸ್ಥೆಗಳಿಗೆ ಅನುದಾನ
ಹುಬ್ಬಳ್ಳಿ, ಡಿ. 16 : ರಾಜ್ಯ ಸರ್ಕಾರದ ನೀತಿ ನಿಯಮಗಳ ಅಡಿಯಲ್ಲಿ ಹು. ಧಾ. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಅಂಗವಿಕಲ ಸೇವಾ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಪಾಲಿಕೆಯಿಂದ ಒಟ್ಟಾರೆ ಕಂದಾಯ ಆದಾಯದ ಶೇ. 3 ರಷ್ಟನ್ನು ಮೀಸಲಿಟ್ಟು ಅದರ ಸದುಪಯೋಗಕ್ಕೆ ಕ್ರಮಕೈಕೊಳ್ಳುವುದಾಗಿ ಹು. ಧಾ. ಪಾಲಿಕೆ ಆಯುಕ್ತ ಡಾ. ಅಜಯ ನಾಗಭೂಷಣ ಭರವಸೆ ನೀಡಿದರು.
ಅಂಗವಿಕಲ ಶಿಕ್ಷಣ ಸಂಸ್ಥೆಗಳಿಗೆ ಅಲ್ಲಿ ದುಡಿಯುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಆರ್ಧಿಕ ಸವಲತ್ತನ್ನು ಹೆಚ್ಚಿಸುವ ಅಗತ್ಯವಿದೆ ಎಂದರು. ಈ ಕುರಿತಂತೆ ಪಾಲಿಕೆ ಒಬ್ಬ ವಿಶೇಷ ಅಧಿಕಾರಿಯ ಮೂಲಕ ಅವಳಿನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅಂಗವಿಕಲ, ಬುದ್ದಿಮಾಂದ್ಯರ ಸೇವಾ ಹಾಗೂ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ತಯಾರಿಸಿ . ಪಾಲಿಕೆಯಿಂದ ದೊರೆಯಬಹುದಾದ ಅನುದಾನ ಅನುಸರಿಸಿ ಕ್ರಿಯಾ ಯೋಜನೆ ತಯಾರಿಸಿ ಅದರ ಜಾರಿಗೆ ಕ್ರಮಕೈಕೊಳ್ಳಲು ಪಾಲಿಕೆ ಪ್ರಯತ್ನಿಸಲಿದೆ ಎಂದು ಹೇಳಿದರು.
ಒಟ್ಟಾರೆಯಾಗಿ ಪಾಲಿಕೆಯಿಂದ ಬಿಡುಗಡೆ ಆಗುವ ಅನುದಾನ ಅದರ ಫಲಾನುಭವಿಗಳಾದ ಅಂಗವಿಕಲ ಮಕ್ಕಳ ಹಿತಾಸಕ್ತಿಗೆ ಉಪಯೋಗ ಆಗುವದಕ್ಕೆ ಗಮನ ನೀಡಲಾಗುವದು. ಈ ಮೂಲಕ ಸಮಾಜದಲ್ಲಿ ಅಂಗವಿಕಲ ಮಕ್ಕಳಿಗೆ, ಅವರ ಶಿಕ್ಷಣ ಪೋಷಣೆ ಜವಾಬ್ದಾರಿ ಹೊತ್ತ ಸಂಘ ಸಂಸ್ಥೆಗಳ ಕಾರ್ಯಕ್ಕೆ ಸರಿಯಾದ ನ್ಯಾಯ ಒದಗಿಸಲು ಪಾಲಿಕೆ ಪ್ರಯತ್ನಿಸಲಿದೆ ಎಂದು ಪಾಲಿಕೆ ಆಯುಕ್ತ ಡಾ. ಅಜಯ ನಾಗಭೂಷಣ ನುಡಿದರು.
ಹುಬ್ಬಳ್ಳಿಯಲ್ಲಿಂದು ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ, ಅಂಗವಿಕಲರ ಸ್ವಯಂ ಸೇವಾ, ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಅಂಗವಿಕಲ ದಿನಾಚರಣೆ ನಿಮಿತ್ಯ ಏರ್ಪಡಿಸಿದ ಅಂಗವಿಕಲ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು .
(ದಟ್ಸ್ ಕನ್ನಡ ವಾರ್ತೆ)
ಬೆಳಗಾವಿಯಲ್ಲಿ ಅಂಗವಿಕಲರ ಕ್ರೀಡಾಕೂಟ












Click it and Unblock the Notifications