ಡಿಎನ್ಎ ಪತ್ರಿಕೆ ಹಂಚುವ ಹುಡುಗರ ಹೋರಾಟ

"ಈಗಾಗಲೇ ಗ್ರಾಹಕರಿಂದ ವರ್ಷಕ್ಕೆ 300 ರೂ.ಗಳಂತೆ ವಾರ್ಷಿಕ ಚಂದಾ ಹಣವನ್ನು ಡಿಎನ್ಎ ಆಡಳಿತ ಮಂಡಳಿ ಸಂಗ್ರಹಿಸಿದೆ. ನಮ್ಮ ಕೆಲಸ ಏನಿದ್ದರೂ ಅದನ್ನು ವಿತರಣೆ ಮಾಡಿ ಸೇವಾ ಶುಲ್ಕ ಪಡೆಯುವುದೇ ವಿನಃ ಖರೀದಿ ಮಾಡಿ ಬ್ಯುಸಿನೆಸ್ ಮಾಡುವುದಲ್ಲ; ಬೇರೆ ಯಾವ ಪತ್ರಿಕೆಯೂ ಹೀಗೆ ಮಾಡಿಲ್ಲ'' ಎಂಬುದು ಬೆಂಗಳೂರು ಪತ್ರಿಕಾ ವಿತರಕ ಕಾರ್ಮಿಕರ ಪ್ರತಿಪಾದನೆ.
'ಒಂದು ಪತ್ರಿಕೆಯನ್ನು ಒಬ್ಬ ಓದುಗನಿಗೆ ಮೊದಲೇ ಮಾರಿದ ಮೇಲೆ ಮತ್ತೆ ನಮ್ಮಿಂದ ಹಣ ವಸೂಲಿ ಮಾಡುವುದು ಕಾನೂನಿಗೆ ವಿರೋಧವಲ್ಲವೆ?' ಎಂದು ಬೆಂಗಳೂರು ದಿನಪತ್ರಿಕೆ ವಿತರಕರ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಕೇಳುತ್ತಾರೆ.
'ಹಾಗೇನಿಲ್ಲ, ಪೇಪರ್ ಹಾಕರ್‌ಗಳೂ ನಮ್ಮ ಬ್ಯುಸಿನೆಸ್ ಪಾರ್ಟ್‌ನರ್‌ಗಳು, ಆದ್ದರಿಂದಲೇ ಅವರ ಹತ್ತಿರ ಹಣ ಕೇಳುತ್ತಿದ್ದೇವೆ' ಎನ್ನುವ ಡಿಎನ್ಎ ಪತ್ರಿಕೆಯ ಮಾರುಕಟ್ಟೆ ಅಧಿಕಾರಿ ತೋಂಟದಾರ್ಯ, ಈ ಬಗ್ಗೆ ಯಾವುದೇ ಲಿಖಿತ ಪತ್ರವಾಗಲೀ, ದಾಖಲೆಯಾಗಲೀ ಇಲ್ಲ ಎಂದೂ ಒಪ್ಪಿಕೊಳ್ಳುತ್ತಾರೆ.
'ಒಂದು ವೇಳೆ ಪೇಪರ್ ಹಾಕುವ ಹುಡುಗರು ಪತ್ರಿಕೆಯನ್ನು ಖರೀದಿಸಿ ಓದುಗರಿಗೆ ತಲುಪಿಸದೇ ಇದ್ದರೆ ಏನು ಮಾಡುತ್ತೀರಿ? ಪೇಪರ್ ಹಾಕುವ ಹುಡುಗರನ್ನು ನಂಬಿದ್ದೇ ಆದರೆ ಮುಂಚಿತ ಹಣ ಯಾಕೆ ಕೇಳುತ್ತೀರಿ' ಎನ್ನುವುದು ಪೇಪರ್ ಹಾಕುವ ಕಾರ್ಮಿಕರು ಕೇಳುವ ಪ್ರಶ್ನೆ. ಈ ಮಧ್ಯೆ ಈ ವಿವಾದವನ್ನು ಪರಿಹರಿಸಲು ಮಾತುಕತೆಗೆ ಮುಂಬೈಯಿಂದ ಬರಬೇಕಾಗಿದ್ದ ಡಿಎನ್ಎ ಸಂಸ್ಥೆಯ ಮಾರುಕಟ್ಟೆ ನಿರ್ದೇಶಕ ಗಿರೀಶ್ ಅಗರ್‌ವಾಲ್ ಬೆಂಗಳೂರಿಗೆ ಬರಲಿಲ್ಲ ಎಂದು ಹಾಕರ್‌ಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಾಗಡಿ ರಸ್ತೆಯ ಟೋಲ್‌ಗೇಟ್ ಬಳಿ ಮಂಗಳವಾರ ಬೆಳಗ್ಗೆ ಪತ್ರಿಕೆ ಹಂಚಲು ಯತ್ನಿಸಿದ ಡಿಎನ್ಎ ಮಾರುಕಟ್ಟೆ ಅಧಿಕಾರಿ ತೋಂಟದಾರ್ಯ ಮತ್ತಿತರರನ್ನು ಸುತ್ತುಗಟ್ಟಿದ ಹಾಕರ್‌ಗಳು ಪತ್ರಿಕೆಯ ಪ್ರತಿಗಳನ್ನು ಹರಿದು ಪ್ರತಿಭಟಿಸಿದರು. ಸಾವಿರಾರು ಕೋಟ್ಯಂತರ ರೂ. ಬಂಡವಾಳ ಹೂಡಿದ ಸಂಸ್ಥೆಗೆ ಹಾಕರ್‌ಗಳಿಂದ ಒಂದು ರೂಪಾಯಿ ಭಿಕ್ಷೆ ಬೇಕೆ ಎಂದು ಕಾರ್ಮಿಕರು ವ್ಯಂಗ್ಯವಾಡಿದರು.
ಮೂರು ದಿನಗಳಿಂದ ಡಿಎನ್ಎ ಪತ್ರಿಕೆ ಪ್ರಕಟವಾಗುತ್ತಿದ್ದರೂ ಓದುಗರಿಗೆ ತಲುಪುತ್ತಿಲ್ಲ. ಬುಧವಾರ, ನಾಲ್ಕನೆಯ ದಿನವೂ ಈ ಪ್ರತಿಭಟನೆ ಮುಂದುವರಿಯುವ ಸಾಧ್ಯತೆಗಳಿವೆ. ಅಂದಹಾಗೆ, ನೀವೂ ಡಿಎನ್ಎ ಪತ್ರಿಕೆಗೆ ಚಂದಾದಾರರಾಗಿದ್ದೀರಾ?
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications