ಬಿಎಸ್ ವೈಗೆ ಗೌರವ ಡಾಕ್ಟರೇಟ್, ಪೂಜಾರಿ ವ್ಯಂಗ್ಯ
ಬೆಂಗಳೂರು, ಡಿ.13: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಮೆರಿಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಸಿಕ್ಕಿರುವ ಬಗ್ಗೆ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಕಿಡಿ ಕಾರಿದ್ದಾರೆ. ಯಡಿಯೂರಪ್ಪ ನವರ ಯಾವ ಸಾಧನೆಗಾಗಿ ಡಾಕ್ಟರೇಟ್ ನೀಡಲಾಗುತ್ತಿದೆ. ಇದನ್ನು ಸ್ವೀಕರಿಸಲು ಅವರಿಗೆ ಯಾವ ಅರ್ಹತೆ ಇದೆ. ಆರು ತಿಂಗಳ ಅಭಿವೃದ್ಧಿಗೆ ಸಂದ ಗೌರವ ಇದು ಎಂದು ಜನಾರ್ಧನ ಪೂಜಾರಿ ವ್ಯಂಗವಾಡಿದರು.
ಶನಿವಾರ ಅವರು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರೊಂದಿಗೆ ಮಾತನಾಡುತ್ತಾ, ಆರು ತಿಂಗಳ ಕಾಲವಧಿಯಲ್ಲಿ ಯಡಿಯೂರಪ್ಪ ವಿದೇಶಕ್ಕೆ ತೆರಳುತ್ತಿರುವುದು ಇದು ಮೂರನೆ ಸಲ. ಇವರೊಂದಿಗೆ ಇಬ್ಬರು ಸಚಿವರನ್ನ್ನು ಕರೆದುಕೊಂಡು ಹೋಗುವ ಅವಶ್ಯಕತೆ ಏನಿತ್ತು ಎಂದು ಜನಾರ್ಧನ ಪೂಜಾರಿ ಪ್ರಶ್ನಿಸಿದರು. ಯಡಿಯೂರಪ್ಪನವರ ಸಾಧನೆ ಶೂನ್ಯ. ಇದೊಂದು ಭ್ರಷ್ಟ ಸರ್ಕಾರ ಎಂದು ಆರೋಪಿಸಿದರು.
ಇಷ್ಟಕ್ಕೂ ಯಡಿಯೂರಪ್ಪನವರಿಗೆ ಯಾವ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡುತ್ತಿದೆ, ಅವರ ಯಾವ ಸಾಧನೆಗಾಗಿ ಡಾಕ್ಟರೇಟ್ ನೀಡಲಾಗುತ್ತಿದೆ ಎಂಬುದನ್ನು ಅವರು ಏಕೆ ಬಹಿರಂಗ ಪಡಿಸಿಲ್ಲ. ಇದನ್ನು ಸ್ವೀಕರಿಸುವುದಕ್ಕೂ ಮುನ್ನ ಅವರು ಮಾಧ್ಯಮದವರಿಗೆ ತಿಳಿಸಬೇಕಾಗಿತ್ತು. ರಾಜ್ಯದಲ್ಲಿ ರೈತರ ಮೇಲಿನ ಗೋಲಿಬಾರ್, ವರ್ಗಾವಣೆ ದಂಧೆ, ಚರ್ಚಗಳ ಮೇಲಿನ ದಾಳಿ ಮಾಡಿದ್ದಕ್ಕೆ ಪ್ರತಿಫಲವಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ವಿನಃ ಅವರ ಯಾವ ಸಾಧನೆಗೂ ಅಲ್ಲ ಎಂದು ಲೇವಡಿ ಮಾಡಿದರು.
(ದಟ್ಸ್ ಕನ್ನಡ ವಾರ್ತೆ)
ಯಡಿಯೂರಪ್ಪ ಇದೀಗ ಡಾ.ಯಡಿಯೂರಪ್ಪ












Click it and Unblock the Notifications