ಸಿಎಂ ದೇಶಮುಖ್ ರಾಜಿನಾಮೆ ಅಂಗೀಕಾರ
ಮುಂಬೈ, ಡಿ. 4 : ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ರಾಜೀನಾಮೆ ಪತ್ರವನ್ನು ಅಂಗೀಕರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಎಕೆ ಎಂಟನಿ ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದ ದೇಶಮುಖ್ ತಲೆದಂಡಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಸ್ತು ಎಂದಿದೆ. ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ನಾಯಕರಾದ ಎಕೆ ಎಂಟನಿ ಹಾಗೂ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಇಂದು ಕಾಂಗ್ರೆಸ್ ಶಾಸಕರ ಸಭೆ ನಡೆಸಲಿದ್ದಾರೆ. ಸಂಜೆ ವೇಳೆಗೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ಮುಂಬೈ ಭಯೋತ್ಪಾದನೆ ನಂತರ ಮಹಾರಾಷ್ಟ್ರ ಸರ್ಕಾರ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ವಿಲಾಸ್ ರಾವ್ ದೇಶಮುಖ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಕಾಂಗ್ರೆಸ್ ಪಕ್ಷದಲ್ಲಿಯೇ ಒತ್ತಡ ಹೆಚ್ಚಿತ್ತು. ಅಲ್ಲದೇ ಉಗ್ರರ ದಾಳಿಯ ನಂತರ ತಾಜ್ ಹೋಟೆಲ್ ಗೆ ಪರಿಶೀಲನೆ ತೆರಳಿದ ವಿಲಾಸ್ ರಾವ್ ದೇಶಮುಖ್, ಜತೆಯಲ್ಲಿ ಬಾಲಿವುಡ್ ಚಿತ್ರ ನಿರ್ದೇಶಕ ರಾಂ ಗೋಪಾಲ್ ವರ್ಮಾ ಹಾಗೂ ಅವರ ಪುತ್ರ ರಿತೇಶ್ ಅವರನ್ನು ಕರೆದುಕೊಂಡು ಹೋಗಿದ್ದು ಭಾರಿ ವಿವಾದವಾಗಿ ಪರಿಣಮಿಸಿತ್ತು.
ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಕೂಡಾ ಮುಖ್ಯಮಂತ್ರಿ ಬದಲಾವಣಿಗೆ ಸಮ್ಮತಿಸಿದ್ದರು. ಮುಂಬೈ ಭಯೋತ್ಪಾದನೆ ಬಗ್ಗೆ ಲಘುವಾಗಿ ಹೇಳಿಕೆ ನೀಡಿದ್ದ ಉಪಮುಖ್ಯಮಂತ್ರಿ ಆರ್ ಆರ್ ಪಾಟೀಲ್ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಘಟನೆಯ ಹೊಣೆ ಹೊತ್ತು ಕೇಂದ್ರದ ಗೃಹ ಸಚಿವ ಶಿವರಾಜ್ ಪಾಟೀಲ್ ಕೂಡಾ ಪದತ್ಯಾಗ ಮಾಡಿದ್ದಾರೆ. ಸುಶೀಲ್ ಕುಮಾರ್ ಶಿಂಧೆ ಮಹಾ ಸಿಎಂ ಆಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications