ಚರ್ಚ್ ದಾಳಿ :ಮಹಾಜನಗಳೇ ಮಾಹಿತಿ ನೀಡಿ
ಮಂಗಳೂರು, ಡಿ. 3: ರಾಜ್ಯ ಸರ್ಕಾರವು ರಾಜ್ಯದ ದಕ್ಷಿಣ ಕನ್ನಡ ಮತ್ತು ಇತರೆ ಜಿಲ್ಲೆಗಳಲ್ಲಿ 2008ರ ಸೆಪ್ಟೆಂಬರ್‌ನಲ್ಲಿ ನಡೆದ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ್ ವಿಚಾರಣಾ ಆಯೋಗ ತನಿಖೆ ಮುಂದುವರೆಸಿದೆ. ಆದರೆ ಅಗತ್ಯ ಮಾಹಿತಿ ಕಲೆಹಾಕುವಲ್ಲಿ ಸಾರ್ವಜನಿಕರ ನೆರವು ಅಗತ್ಯ ಎಂದು ಆಯೋಗ ಮನಗಂಡಿದೆ.
ಈ ಗಲಭೆಗಳ ಬಗ್ಗೆ ನಿರ್ಧಿಷ್ಟ ವಿವರಗಳನ್ನೊಳಗೊಂಡ ಹೇಳಿಕೆಗಳು / ಶಪಥ ಪತ್ರಗಳನ್ನು ಎಲ್ಲಾ ದಾಖಲಾತಿಗಳೊಂದಿಗೆ ಹದಿನೈದು ದಿನಗಳಲ್ಲಿ ಆಯೋಗದ ಕಚೇರಿ ಕಾರ್ಯನಿರ್ವಹಿಸುವ ದಿನದಂದು ಬೆಳಿಗ್ಗೆ10.30 ರಿಂದ ಸಂಜೆ 5 ಗಂಟೆಯೊಳಗೆ ಆಯೋಗಕ್ಕೆ ಸಲ್ಲಿಸಬಹುದು.
ಆಯೋಗದ ವಿಳಾಸ : ಕಾರ್ಯದರ್ಶಿ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ್ ವಿಚಾರಣಾ ಆಯೋಗ, ಬಾಲಬ್ರೂಯಿ ಅತಿಥಿ ಗೃಹ, ಅರಮನೆ ರಸ್ತೆ, ಬೆಂಗಳೂರು ಜಲಮಂಡಳಿ ಕಚೇರಿ ಎದುರು, ಬೆಂಗಳೂರು - 560052 ಅಥವಾ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಮೂಲಕ ಅಥವಾ ವಿದ್ಯುನ್ಮಾನ ಮಾಧ್ಯಮದ ಮೂಲಕ [email protected] ಗೆ ಸಲ್ಲಿಸಬಹುದು ಎಂದು ವಿಚಾರಣಾ ಆಯೋಗದ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ನಗರದ ಆನೇಕಲ್ ಬಳಿ ಯಡಗೊಂಡನ ಹಳ್ಳಿ ಚರ್ಚ್ ದಾಳಿಯ ಬಗ್ಗೆ ಸಮಗ್ರ ತನಿಖೆ ನಡೆಸಿರುವ ಆಯೋಗ, ಚಿಕ್ಕಮಗಳೂರು ಹಾಗೂ ಕರಾವಳಿ ಜಿಲ್ಲೆಗಳ ಕಡೆ ಮುಖ ಮಾಡಿದ್ದು, ಮಾಹಿತಿ ಕಲೆ ಹಾಕುವಲ್ಲಿ ನಿರತವಾಗಿದೆ ಎಂದು ತಿಳಿದುಬಂದಿದೆ. ಎರಡು ತಿಂಗಳ ತನಿಖೆಯಲ್ಲಿ ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ ಹಾಗೂ ಉಡುಪಿಜಿಲ್ಲೆಗಳಿಗೆ ಆಯೋಗ ಭೇಟಿ ನೀಡಿದೆ. ಸುಮಾರು 30 ಸ್ಥಳಗಳನ್ನು ಗುರುತಿಸಲಾಗಿದ್ದು, ಎಲ್ಲವನ್ನು ಸಮಗ್ರವಾಗಿ ವಿಚಾರಣೆ ನಡೆಸಲು ಸಾಕಷ್ಟು ಸಮಯ ಬೇಕು ಎಂದು ನ್ಯಾಯಮೂರ್ತಿ ಸೋಮಶೇಖರ್ ಹೇಳಿದ್ದಾರೆ.
ಹೀಗಾಗಿ ತನಿಖೆ ಇನ್ನೂ ಕೆಲವು ತಿಂಗಳುಗಳ ಕಾಲ ಮುಂದುವರೆಯಲಿದೆ. ಮಂಗಳೂರಿನಲ್ಲಿ ಸುಮಾರು 200 ಹೇಳಿಕೆಗಳು / ಶಪಥ ಪತ್ರ ಹಾಗೂ ಉಡುಪಿಯಲ್ಲಿ 74ಹೇಳಿಕೆಗಳು / ಶಪಥ ಪತ್ರಗಳನ್ನು ಆಯೋಗ ಕಲೆ ಹಾಕಿದೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications