ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ತೀವ್ರ ವಿರೋಧ
ತುಮಕೂರು, ಡಿ. 4 : ಅನಿತಾ ಕುಮಾರಸ್ವಾಮಿ ಅವರನ್ನು ಮಧುಗಿರಿ ಕ್ಷೇತ್ರದ ಮರುಚುನಾವಣೆಯಲ್ಲಿ ಕಣಕ್ಕಿಳಿಸಲು ಜೆಡಿಎಸ್ ವರಿಷ್ಠರ ಕ್ರಮವನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ಅನಿತಾ ಅವರ ಸ್ಪರ್ಧೆಯಿಂದ ಕುಟುಂಬ ರಾಜಕಾರಣವನ್ನು ದೇವೇಗೌಡರು ಮುಂದುವರೆಸಿದ್ದಾರೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಅನಿತಾ ಕುಮಾರಸ್ವಾಮಿ ಅವರನ್ನು ಮಧುಗಿರಿಯಲ್ಲಿ ಸ್ಪರ್ಧಿಸುವಂತೆ ಸೂಚನೆ ನೀಡಿರುವುದು ಪ್ರಜಾಪ್ರಭುತ್ವ ಕಗ್ಗೊಲೆ, ಇದು ರಾಜ್ಯ ರಾಜಕೀಯಕ್ಕೆ ಮಾರಕವಾದ ಬೆಳವಣಿಗೆ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್ ನಲ್ಲಿ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಗಳೆ ಇಲ್ಲ. ಜೆಡಿಎಸ್ ಪರಿಸ್ಥಿತಿ ಶೋಚನೀಯ ಮಟ್ಟ ತಲುಪಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದರು.
ಗೌಡರ ಪಕ್ಷದಲ್ಲಿ ಹುರಿಯಾಳುಗಳ ಕೊರತೆ ಇದೆ. ಅದರಿಂದ ಮನೆಯಲ್ಲಿರುವ ಎಲ್ಲರನ್ನು ತಂದು ಅಖಾಡಕ್ಕೆ ತಂದು ನಿಲ್ಲಿಸುತ್ತಿದ್ದಾರೆ. ಇದರ ಪರಿಣಾಮವೇ ಅನಿತಾ ಅವರಿಗೆ ಸ್ಪರ್ಧೆಯಾಗಿದೆ ಎಂದು ಅವರು ವ್ಯಂಗ್ಯವಾಡಿದರು. ದೇವೇಗೌಡರಿಗೆ ತಾಕತ್ತಿದ್ದರೆ ಮಧುಗಿರಿಯಲ್ಲಿ ಸಾಮಾನ್ಯ ರೈತನೊಬ್ಬನನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರಲಿ ಎಂದು ಸವಾಲು ಹಾಕಿದರು.
ಅನಿತಾ ನಕಾರ
ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ಜೆಡಿಎಸ್ ಪಕ್ಷದಿಂದ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಅನಿತಾ ಕುಮಾರಸ್ವಾಮಿ, ಮಧುಗಿರಿಯಲ್ಲಿ ಸ್ಪರ್ಧಿಸುವ ಚಿಂತಿಸಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಕಾಲಾವಕಾಶ ಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಧುಗಿರಿಯಲ್ಲಿ ಬಿಜೆಪಿಯಿಂದ ಸಿ ಚೆನ್ನಿಗಪ್ಪ ಸ್ಪರ್ಧಿಸಲಿದ್ದಾರೆ. ಒಂದು ಕಾಲದ ಗೌಡ ನಿಯತ್ತಿನ ಮನುಷ್ಯರಾಗಿದ್ದ ಚೆನ್ನಿಗಪ್ಪ, ಇತ್ತೀಚೆಗೆ ದೇವೇಗೌಡರಿಂದ ಮುನಿಸಿಕೊಂಡು ಬಿಜೆಪಿ ಸೇರ್ಪಡೆಯಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ: ಚೆನ್ನಿಗನ ಮಣಿಸಲು ಗೌಡರ ಸೊಸೆ ಅನಿತಾ












Click it and Unblock the Notifications