ಉಗ್ರರ ಹಸ್ತಾಂತರ ಅಸಾಧ್ಯ : ಪಾಕ್
ಇಸ್ಲಾಮಾಬಾದ್, ಡಿ. 3 : ಪಾಕಿಸ್ತಾನದಲ್ಲಿ ನೆಲೆಸಿರುವ ಭಾರತಕ್ಕೆ ಬೇಕಿರುವ ಮೊಸ್ಟ್ ವಾಂಟೆಡ್ ಟೆರರಿಸ್ಟ್ ಗಳ ಪಟ್ಟಿಯಲ್ಲಿರುವ 20 ಮಂದಿ ಭಯೋತ್ಪಾದಕರನ್ನು ಹಸ್ತಾಂತರಿಸಲು ಪಾಕಿಸ್ತಾನದ ಅಧ್ಯಕ್ಷ ಆಸೀಫ್ ಅಲೀ ಜರ್ದಾರಿ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಪಾಕಿಸ್ತಾನದ ಮೇಲೆ ಭಾರತ ವಿನಾಕಾರಣ ಗೂಬೆ ಕೂರಿಸತೊಡಗಿದೆ. ಮುಂಬೈ ಕೃತ್ಯದಲ್ಲಿ ಪಾಕಿಸ್ತಾನಕ್ಕೆ ಸಂಬಂಧಿಸಿದ ವ್ಯಕ್ತಿಗಳ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಯಾವ ಆಧಾರವಿಲ್ಲ ಎಂದು ಅವರು ಹೇಳಿದ್ದಾರೆ.
ಬುಧವಾರ ಇಸ್ಲಾಮಾಬಾದ್ ನಲ್ಲಿ ಸುದ್ದಿ ವಾಹಿನಿಯೊಂದರ ನೇರ ಪ್ರಸಾರದಲ್ಲಿ ಅವರು ಮಾತನಾಡುತ್ತಿದ್ದರು. ಭಾರತ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಅವರ ಬಳಿ ಯಾವುದೇ ಪುರಾವೆಗಳೂ ಇಲ್ಲ ಎಂದರು. ಪಾಕಿಸ್ತಾನದಲ್ಲಿ ಉಗ್ರರು ನೆಲೆಸಿದ್ದಾರೆ ಎಂದು ಆರೋಪ ಮಾಡುತ್ತಿರುವ ಭಾರತ ಮೊದಲು ಇವರ ಮೇಲಿರುವ ಪ್ರಕರಣಗಳಿಗೆ ಸಾಕ್ಷಿ ಒದಗಿಸಲಿ ಎಂದು ಜರ್ದಾರಿ ಹೇಳಿದ್ದಾರೆ. ಭಯೋತ್ಪಾದನೆ ಹತ್ತಿಕ್ಕಲು ಪಾಕಿಸ್ತಾನ ಸಹಕರಿಸಲಿದೆ, ಅದರಲ್ಲಿ ಸಂಶಯಬೇಡ. ಸಾಕ್ಷ್ಯಾಧಾರಗಳನ್ನು ಒದಗಿಸಿದರೆ ಪಾಕಿಸ್ತಾನದ ನ್ಯಾಯಾಲಯದಲ್ಲಿ ತಪ್ಪಿತಸ್ಥರಿಗೆ ಖಂಡಿತವಾಗಿಯೂ ಶಿಕ್ಷೆ ನೀಡುತ್ತೇವೆ ಎಂದು ಹೇಳುವ ಮೂಲಕ ಭಾರತ ಇಟ್ಟಿರುವ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ಭಯೋತ್ಪಾದನೆಯಲ್ಲಿ ಪಾಕ್ ಕೈವಾಡವಿದೆ ಎಂದು ಭಾರತ ಹೇಳುತ್ತಿರುವ ಶುದ್ಧ ಸುಳ್ಳು. ಇದನ್ನು ಪಾಕಿಸ್ತಾನ ಸ್ಪಷ್ಟವಾಗಿ ನಿರಾಕರಸಲಿದೆ ಎಂದ ಜರ್ದಾರಿ, 1 ಮಂದಿ ಉಗ್ರರಲ್ಲಿ 9 ಮಂದಿ ಕೊಂದಿರುವ ಭಾರತ ಎನ್ಎಸ್ ಜಿ ಪಡೆ ಉಳಿದ ಒಬ್ಬನನ್ನು ಮಾತ್ರ ಸೆರೆ ಹಿಡಿಯಿತು. ಗುಂಡಿನ ಕಾಳಗದಲ್ಲಿ ಒಬ್ಬನು ಮಾತ್ರ ಉಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅಜ್ಮಲ್ ಅಮೀರ್ ಕಸಾಬ್ ಪಾಕಿಸ್ತಾನದ ಪ್ರಜೆಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications