ಉಗ್ರರೆ ನಿಮ್ಮ ಆಟ ನಡೆಯುವುದಿಲ್ಲ, ಯಡಿಯೂರಪ್ಪ
ಕಲ್ಬುರ್ಗಿ, ಡಿ. 3 : ಚಂದ್ರನಡೆಗೆ ಹೆಜ್ಜೆಯಿರಿಸಿರುವುದು ಸೇರಿದಂತೆ ಭಾರತ ವೈಜ್ಞಾನಿಕ ರಂಗದಲ್ಲಿ ಸಾಗುತ್ತಿರುವುದನ್ನು ಸಹಿಸದ ಭಯೋತ್ಪಾದಕರು ಉಪಟಳ ನೀಡುತ್ತಿದ್ದಾರೆ. ಇದಕ್ಕೆ ಭಾರತ, ಭಾರತೀಯರು ಎಂದಿಗೂ ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಆಳಂದ ತಾಲೂಕಿನ ಜಿಡಗಾದಲ್ಲಿ ನಡೆದ ಜಿಡಗಾ ಮಠದ ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಮಹಾಸ್ವಾಮಿಗಳ 24ನೇ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪೊಲೀಸರ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ನಮ್ಮ ಪೊಲೀಸ್ ಹಾಗೂ ಭದ್ರತಾ ಪಡೆ ಇನ್ನಷ್ಟು ಬಲಪಡಿಸುತ್ತೇವೆ. ದೇಶದ್ರೋಹಿಗಳನ್ನು ದೇಶದೊಳಗೆ ಬಿಟ್ಟುಕೊಳ್ಳುವುದಿಲ್ಲ ಎಂಬ ಸಂಕಲ್ಪವನ್ನು ಜನತೆ ಕೈಗೊಳ್ಳಬೇಕು ಎಂದರು. ಮುಂಬೈ ಹಾಗೂ ಭಾರತದ ವಿವಿಧ ಭಾಗಗಳಲ್ಲಿ ಸಂಭವಿಸಿದ ದುರ್ಘಟನೆಗಳು ಕರ್ನಾಟಕದಲ್ಲಿ ಸಂಭವಿಸದಂತೆ ಭದ್ರತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬಡವರ, ಕೂಲಿಗಳ ಹೆಣ್ಣು ಮಕ್ಕಳು ಕೂಡ ಪದವೀಧರ, ವೈದ್ಯ, ಇಂಜಿನಿಯರ್ ಆಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ಭಾಗ್ಯಲಕ್ಷ್ಮಿ ಯೋಜನೆಯನ್ನು ತರಲಾಗಿದೆ. ಸ್ತ್ರೀಯರನ್ನು ಸಬಲೀಕರಣಗೊಳಿಸಲು ಸ್ತ್ರೀ ಶಕ್ತಿ ಸಂಘಗಳು, ಸ್ವಸಹಾಯ ಸಂಘಗಳನ್ನು ತುಂಬಾ ಬಲಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಒಂದು ಸಾವಿರ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯವನ್ನು ನಿರ್ಮಿಸಿ, ಮುಂದಿನ ಜೂನ್‌ನಿಂದ ಶಾಲೆ ಆರಂಭಿಸುತ್ತಿರುವ ಜಿಡಗಾ ಮಠಕ್ಕೆ ಶಿಕ್ಷಣದ ಅಭಿವೃದ್ಧಿ ಹಾಗೂ ಕಟ್ಟಡದ ಕೆಲಸಕ್ಕಾಗಿ 1 ಕೋಟಿ ರೂ. ನೀಡುವುದಾಗಿ ಅವರು ಘೋಷಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications