ಕೇರಳ ಸಿಎಂ ಹೇಳಿಕೆ, ಕಾರಟ್ ಕ್ಷಮೆಯಾಚನೆ
ಜೈಪುರ, ಡಿ. 3 : ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುಟುಂಬ ಸದಸ್ಯರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿಕೆ ನೀಡಿದ ಕೇರಳದ ಮುಖ್ಯಮಂತ್ರಿ ಅಚ್ಯುತನಂದನ್ ವಿರುದ್ಧ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕೇರಳದ ಮುಖ್ಯಮಂತ್ರಿ ಮಾಡಿರುವ ತಾವು ಅವಮಾನಕ್ಕೆ ತಾವು ಕ್ಷಮೆಯಾಚಿಸುವುದಾಗಿ ಹೇಳಿದರು.
ರಾಜಸ್ಥಾನ ಚುನಾವಣಾ ಪ್ರಚಾರದಲ್ಲಿರುವ ಪ್ರಕಾಶ್ ಕಾರಟ್, ದೇಶಕ್ಕಾಗಿ ಹುತಾತ್ಮನಾದ ಕುಟುಂಬಕ್ಕೆ ಮುಖ್ಯಮಂತ್ರಿಯೊಬ್ಬರು ಹೀಗೆ ಮಾತನಾಡುವುದು ಅಕ್ಷಮ್ಯ. ಕ್ಷಮೆಗೂ ಕೂಡಾ ಅರ್ಹವಲ್ಲದೆ ಮಾತುಗಳನ್ನು ಅವರು ಆಡಿದ್ದಾರೆ. ಇದರ ಬಗ್ಗೆ ನಾವು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದು ಕಾರಟ್ ಸ್ಪಷ್ಟಪಡಿಸಿದರು. ಉನ್ನಿಕೃಷ್ಣನ್ ಅವರು ತಪ್ಪನ್ನು ಮನ್ನಿಸಬೇಕು ಎಂದು ಸಹ ಕಾರಟ್ ಮನವಿ ಮಾಡಿಕೊಂಡಿದ್ದಾರೆ.
ಮುಂಬೈ ಭಯೋತ್ಪಾದನೆಯಲ್ಲಿ ವೀರಮರಣ ಅಪ್ಪಿದ ಮೇಜರ್ ಸಂದೀಪ್ ಮನೆಗೆ ಸಂತಾಪ ಸೂಚಿಸಲು ಕೇರಳದ ಮುಖ್ಯಮಂತ್ರಿ ಅಚ್ಯುತನಂದನ್ ಭೇಟಿ ನೀಡಿದ್ದರು.ಪುತ್ರ ಶೋಕದಲ್ಲಿದ್ದ ಎನ್ ಎಸ್ ಜಿ ಮೇಜರ್ ಸಂದೀಪ್ ತಂದೆ ಉನ್ನಿಕೃಷ್ಣನ್ ಮುಖ್ಯಮಂತ್ರಿಯವರನ್ನು ತಮ್ಮ ಮನೆಯ ಒಳಗೆ ಬಿಟ್ಟುಕೊಂಡಿರಲಿಲ್ಲ. ರಾಜಕೀಯ ವ್ಯಕ್ತಿಗಳು ನನ್ನ ಮನೆಗೆ ಬರುವುದು ಇಷ್ಟವಿಲ್ಲ ಎಂದು ಹೇಳಿ ಮನೆ ಬಾಗಿಲು ಹಾಕಿಕೊಂಡಿದ್ದರು.
ಮರುದಿನ ಮಾಧ್ಯಮದೆದುರು ಪ್ರತಿಕ್ರಿಯೆ ನೀಡಿದ ಅಚ್ಯುತ್ ನಂದನ್, ಉನ್ನಿಕೃಷ್ಣನ್ ವಿರುದ್ಧ ಖಾರವಾಗಿ ಮಾತನಾಡಿದ್ದರು. ಸಂದೀಪ್ ಮನೆ ಆಗಿಲ್ಲದಿದ್ದರೆ ಅವರ ಮನೆಗೆ ನಾಯಿ ಕೂಡಾ ಹೋಗುತ್ತಿರಲಿಲ್ಲ ಎಂದಿದ್ದರು. ಅಷ್ಟಕ್ಕೆ ಸುಮ್ಮನಾಗದ ಅವರು, ಉನ್ನಿಕೃಷ್ಣನ್ ಹುಚ್ಚನ ತರಹ ವರ್ತಿಸಿದರು ಎಂದು ಕೋಪ ವ್ಯಕ್ತಪಡಿಸಿದ್ದರು. ಸಂದೀಪ್ ಕುಟುಂಬ ಸದಸ್ಯರು ಮಾನಸಿಕ ಸ್ವಸ್ಥತೆಯನ್ನು ಕಳೆದುಕೊಂಡಿದೆ ಎನ್ನುವ ಮಾತುಗಳನ್ನು ಕೂಡಾ ಆಡಿದ್ದರು. ಸಿಎಂ ಮಾತುಗಳು ಕೇರಳದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು. ದೇಶಕ್ಕಾಗಿ ಪ್ರಾಣ ನೀಡಿದ ಯುವಕನ ಮನೆಯವರಿಗೆ ಮುಖ್ಯಮಂತ್ರಿಯವರು ಹೀಗೆ ಮಾತನಾಡುವುದು ಸರಿಯಲ್ಲ ಎಂದು ಎಲ್ಲರೂ ಖಂಡಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications