ಡಿ.4 ರಿಂದ ಬೆಂಗಳೂರು ಹಬ್ಬ - 2008

ಬೆಂಗಳೂರು, ಡಿ. 3: ಬೆಂಗಳೂರು ನಗರ ಎಲ್ಲ ನಗರಗಳಂತಲ್ಲ. ಇದಕ್ಕೆ ತನ್ನದೇ ಆದ ಇತಿಹಾಸವಿದೆ. ಹಾಗೆಯೇ ಆತ್ಯಾಧುನಿಕತೆ ಇದೆ, ವೇಗವಿದೆ, ಸಾಂಸ್ಕೃತಿಕ ಕಂಪಿದೆ. ಸಾಂಪ್ರ್ರದಾಯಿಕತೆ, ಅತಿ ನವೀನತೆ ಎರಡೂ ಬಗೆಯ ಜೀವನ ಶೈಲಿಗಳು ಇಲ್ಲಿವೆ. ಹೊಸ ಚಿಗುರು ಹಳೆ ಬೇರುಗಳ ಸಂಗಮ ಬೆಂಗಳೂರು. ಪ್ರವಾಸಿಗಳ ಆಕರ್ಷಣೆ ಸ್ಥಳ, ಐಟಿಬಿಟಿ ಉದ್ದಿಮೆದಾರರ ಮೆಚ್ಚಿನ ತಾಣ, ಸಂಸ್ಕೃತಿಯ ಹಲವು ಮಜಲುಗಳ ಮೇಳ, ಸ್ಥಳೀಯರು ಮತ್ತು ಹೊರಗಿನವರಿಗೆ ಸಮಾನ ಆಸರೆ, ಆಕರ್ಷಣೆ.

ಬೆಂಗಳೂರು ನಗರದ ಈ ವೈಶಿಷ್ಟತೆಯನ್ನು ಆಚರಿಸಲು ಹಾಗೂ ಇಲ್ಲಿನ ಅತ್ಯುನ್ನತ ಕಲಾವಿದರುಗಳ ಸದಭಿರುಚಿಯ ಮನರಂಜನೆಯನ್ನು ಮುಕ್ತವಾಗಿ ಜನರಿಗೆ ಉಣಬಡಿಸುವ ವೇದಿಕೆಯಾಗಿ ಈ ಸಾಂಸ್ಕೃತಿಕ ಉತ್ಸವ - ಬೆಂಗಳೂರು ಹಬ್ಬ - 2008 ಅನ್ನು ಸರ್ಕಾರವು ಖಾಸಗಿ ಸಹಭಾಗಿತ್ವದೊಂದಿಗೆ ಆಚರಿಸುತ್ತಿದೆ. ನಾಡಿನ ಸೊಗಡಿನೊಂದಿಗೆ ಕಳೆಕಟ್ಟಲಿರುವ ಈ ಹಬ್ಬದಲ್ಲಿ ಕ್ರೀಡೆಗಳು ಸೇರಿದಂತೆ ಕನ್ನಡ ಭಾಷೆ, ಅಂತಾರಾಷ್ಟ್ರೀಯ ಚಲನಚಿತ್ರಗಳ ಉತ್ಸವವು ನಡೆಯಲಿದೆ.

ಬೆಂಗಳೂರು ಹಬ್ಬದ ಸಮಿತಿಯ ಅಧ್ಯಕ್ಷರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಸುಧಾಕರ ರಾವ್ ಅವರು ಮಾತನಾಡಿ ರಾಜ್ಯಕ್ಕೆ ಆರ್ಥಿಕ ನೀತಿಯೊಂದು ಇರುವ ಹಾಗೆ ಸಾಂಸ್ಕೃತಿಕ ನೀತಿಯು ಅಗತ್ಯ ನಗರದಲ್ಲಿ ಕರಗ ಉತ್ಸವ, ಕಡಲೆಕಾಯಿ ಪರಿಷೆ ಮೊದಲಾದವು ಬೆಂಗಳೂರಿನ ಸಾಂಸ್ಕೃತಿಕ ಶೋಭೆಯ ಸಂಕೇತಗಳಾಗಿವೆ. ಬೆಂಗಳೂರು ಉತ್ಸವದ ಆಚರಣೆಯನ್ನು ಕಳೆದ ಐದು ವರ್ಷಗಳಿಂದ ಖಾಸಗಿಯವರು ನಡೆಸುತ್ತಿದ್ದು ಈ ವರ್ಷ ಈ ಬೆಂಗಳೂರು ಹಬ್ಬವನ್ನು ಸರ್ಕಾರವು ಖಾಸಗಿಯವರೊಂದಿಗೆ ಕೈಜೋಡಿಸಿ ವಿಶಿಷ್ಟ ರೀತಿಯಲ್ಲಿ ಏರ್ಪಡಿಸಲಿದೆ. ಮುಂದಿನ ವರ್ಷಗಳಲ್ಲಿ ನಮ್ಮ ಪಾರಂಪರಿಕ ಆಚರಣೆಗಳಾದ ಕರಗ, ಕಡಲೆಕಾಯಿ ಪರಿಷೆಯೊಂದಿಗೆ ಈ ಹಬ್ಬವನ್ನು ಮೇಳೈಸುವ ಯೋಚನೆಯಿದೆಯೆಂದು ತಿಳಿಸಿದರು.

ನೃತ್ಯ, ಸಂಗೀತ, ನಾಟಕ, ವಿಷುಯಲ್ ಆರ್ಟ್ಸ್ ಜನಪದ, ಸಾಂಪ್ರದಾಯಕ ಕಲೆಗಳು, ಸೂಫಿ ಸಂಗೀತ ಕಾರ್ಯಕ್ರಮ, ಕರಕುಶಲ ಪ್ರದರ್ಶನ ಹೀಗೆ ಹತ್ತು ಹಲವು ಕಲೆಗಳನ್ನು ಪ್ರದರ್ಶಿಸುವ ವೇದಿಕೆ ಇದಾಗಲಿದೆ ಎಂದು ತಿಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಮಹಾನಗರಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ತೋಟಗಾರಿಕಾ ಇಲಾಖೆ, ವಾರ್ತಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮೊದಲಾದ ಎಲ್ಲಾ ಇಲಾಖೆಗಳು ಬೆಂಗಳೂರು ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿವೆ.

ಭಾರತದಲ್ಲೇ ಬೆಂಗಳೂರು ಹಬ್ಬವು ಅತಿ ದೊಡ್ಡ ನಗರ ಹಬ್ಬ. ಸ್ಥಳೀಯ ಕಲಾಪ್ರತಿಭೆಯನ್ನು ಬಳಸಿ ವಾಣಿಜ್ಯ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಗುರಿ ನಮ್ಮದಾಗಿದೆ. ಬೆಂಗಳೂರು ಹಬ್ಬವನ್ನು ಡಿಸೆಂಬರ್ 4 ರಿಂದ21ರವರೆಗೆ ಆಚರಿಸಲಿದ್ದು, ನಗರದ ರವೀಂದ್ರ ಕಲಾಕ್ಷೇತ್ರ, ಸಂಸ ಬಯಲು ರಂಗಮಂದಿರ, ನಯನ ರಂಗಮಂದಿರ, ಸರ್ ಪುಟ್ಟಣ್ಣ ಚೆಟ್ಟಿ ಪುರಭವನ, ನಗರದ ವಿವಿಧ ಬಡಾವಣೆಗಳ ರಂಗ ಮಂದಿರಗಳು ಪ್ರಮುಖ ಉದ್ಯಾನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮ ಉದ್ಪಾಟನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಡಿಸೆಂಬರ್ 4 ರಂದು 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನೆರವೇರಿಸಲಿದ್ದು, ಸಾರಿಗೆ ಸಚಿವ ಆರ್. ಅಶೋಕ್, ಅಬಕಾರಿ, ಜಲಮಂಡಳಿ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ವಾರ್ತಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅವರು ಮುಖ್ಯ ಅತಿಥಿಗಳಾಗಿದ್ದು, ಶಾಸಕ ಡಾ ಹೇಮಚಂದ್ರ ಸಾಗರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಹಬ್ಬದ ಪ್ರಮುಖ ಆಕರ್ಷಣೆಗಳು:

ಹಿಂದೂಸ್ಥಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯ ಕಾರ್ಯಕ್ರಮದೊಂದಿಗೆ ಸೂಫಿ ಮತ್ತು ಜ್ಯಾಸ್ ಮ್ಯೂಸಿಕ್, ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತ, ಡಾ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸಂಗೀತ ರಾತ್ರಿ, ಶ್ರೇಯಾ ಘೋಷಾಲ್ ಅವರಿಂದ ಬಾಲಿವುಡ್ ನೈಟ್, ಪಾಕಿಸ್ಥಾನದ ಪ್ರಖ್ಯಾತ ಸ್ಟ್ರಿಂಗ್ ಅವರ ಕಾರ್ಯಕ್ರಮ, ಭಾರತೀಯ ಬ್ಯಾಂಡ್ ಮ್ರಿಗಯಾ, ಪಂಡಿತ್ ವಿಶ್ವ ಮೋಹನ್ ಭಟ್ ಅವರಿಂದ ರಾಜಸ್ತಾನಿ ಮ್ಯೂಸಿಕ್‌ಗಳು, ಈ ಬಾರಿಯ ಹಬ್ಬದ ವೈಶಿಷ್ಟಗಳಾಗಿವೆ.ಈ ಎಲ್ಲಾ ಕಾರ್ಯಕ್ರಮಗಳಿಗೂ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರುತ್ತದೆ.
(ದಟ್ಸ್ ಕನ್ನಡ ವಾರ್ತೆ)


ಇದನ್ನೂ ಓದಿ:
ಬೆಂಗಳೂರು ಹಬ್ಬ: ಸರ್ಕಾರದಿಂದ ಪ್ರಸ್ತುತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+