ಕೃಷ್ಣ ರಾಜಕಾರಣದ ಭಯೋತ್ಪಾದಕ
ಬೆಂಗಳೂರು, ಡಿ. 2 : ಕಾಂಗ್ರೆಸ್ ಹಿರಿಯ ನಾಯಕ ಎಸ್ ಎಂ ಕೃಷ್ಣ 'ರಾಜಕಾರಣದ ಭಯೋತ್ಪಾದಕ'ನಂತೆ ಏಕಾಏಕಿ ಮಾತನಾಡತೊಡಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರು ಕ್ಷೇತ್ರವನ್ನು ಸಂಪೂರ್ಣವಾಗಿ ಮರೆತಿದ್ದ ಕೃಷ್ಣ, ಚುನಾವಣೆ ಹತ್ತಿರ ಬಂದಾಗ ನೆನಪಾಗಿ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಮದ್ದೂರು ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಶಾಸಕರ ಆಡಳಿತದಿಂದ ಬೇಸತ್ತು ಹೋಗಿದೆ. ಉಪಚುನಾವಣೆಯಲ್ಲಿ ಮತದಾರರು ಈ ಎರಡೂ ಪಕ್ಷಗಳಿಗೆ ಸೂಕ್ತ ಉತ್ತರ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಭಾನುವಾರ ಮದ್ದೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕೃಷ್ಣ ಮಾಡಿದ ಆರೋಪಕ್ಕೆ ವಾಗ್ಧಾಳಿ ನಡೆಸಿದ ಸದಾನಂದಗೌಡ, ತಾವು ಇನ್ನೆನಿದ್ದರೂ ರಾಷ್ಟ್ರ ರಾಜಕಾರಣದ ಬಗ್ಗೆ ಮಾತ್ರ ಮಾತನಾಡುವೆ ಎಂದು ಹೇಳಿರುವುದನ್ನು ಕೃಷ್ಣ ಮರೆತಿರುವಂತಿದೆ. ಇದೀಗ ಏಕಾಏಕಿ ರಾಜ್ಯ ರಾಜಕಾರಣದ ಬಗ್ಗೆ ಆಸಕ್ತಿ ಬರಲು ಕಾರಣವೇನು ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದರು.
ಮದ್ದೂರಿನ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೃಷ್ಣ, ಆಡಳಿತ ಬಿಜೆಪಿ ಪಕ್ಷ ಆಪರೇಷನ್ ಕಮಲ ಹೆಸರಿನಲ್ಲಿ ಜನಪ್ರತಿನಿಧಿಗಳ ಖರೀದಿ ನಡೆಸಿದೆ. ಈ ಸರ್ಕಾರ ವರ್ಗಾವಣೆ ಕಾರ್ಖಾನೆಯನ್ನೇ ತೆರೆದಿದೆ. ರಾಜಕೀಯ ದಲ್ಲಾಳಿಗಳು, ಕಮಿಷನ್ ಆಧಾರದಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡುವ ಕಾರ್ಯದಲ್ಲಿ ತೊಡಗಿದೆ ಎಂದು ಟೀಕಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications