ಎಂಜಿ ರಸ್ತೆಯಲ್ಲಿ ಸಂಜೆ ದೀಪಗಳ ಮೆರವಣಿಗೆ
ಬೆಂಗಳೂರು, ಡಿ. 2 : ಮುಂಬೈ ಭಯೋತ್ಪಾದನಾ ಕೃತ್ಯದಲ್ಲಿ ಮಡಿದ ವೀರ ಯೋಧರಿಗೆ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಕಾಲೇಜು ವಿದ್ಯಾರ್ಥಿಗಳು ರೂಪಿಸಿದ್ದಾರೆ.ಇಂದು ಸಂಜೆ ಮಹಾತ್ಮಾ ಗಾಂಧೀ ರಸ್ತೆಯ ಗಾಂಧೀ ಪ್ರತಿಮೆಯ ಬಳಿ ಸ್ಮರಣೆ ಮತ್ತು ಶಾಂತಿ ಸಭೆ ಹಮ್ಮಿಕೊಳ್ಳಲಾಗಿದೆ. ಮೃತರ ಆತ್ಮಗಳಿಗೆ ಶಾಂತಿ ಕೋರಲು ಮೋಂಬತ್ತಿ ಜ್ಯೋತಿ ಹರಡುವ ಸಾರ್ವಜನಿಕ ಸಭೆಗೆ ಲಾಲ್ ಬಾಗ್ ರಸ್ತೆಯ ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು ಕರೆ ಕೊಟ್ಟಿದ್ದಾರೆ.
ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಎಸಿಪಿ ಅಶೋಕ್ ಕಾಮ್ಟೆ, ವಿಜಯ್ ಸಾಲಸ್ಕರ್ ಹಾಗೂ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ ಘಟನೆಯಲ್ಲಿ ಮೃತಪಟ್ಟಿರುವ 195 ಜನರ ಸವಿನೆನಪಿಗಾಗಿ ಕಾಲೇಜಿನ ವಿದ್ಯಾರ್ಥಿಗಳು ದೀಪಗಳ ಮೆರವಣಿಗೆ ನಡೆಸುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ. ಅಗಲಿದ ಆತ್ಮಗಳಿಗೆ ಶಾಂತಿ ಕೋರಲು ನೀವೂ ಬನ್ನಿ ಎಂದಿದ್ದಾರೆ ಕಾಲೇಜಿನ ಪ್ರಾಂಶುಪಾಲರಾದ ಡಾ.( ಫಾದರ್) ಆಂಬ್ರೋಸ್ ಪಿಂಟೋ.
ಭಾರತದಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಪೈಶಾಚಿಕೆ ಕೃತ್ಯಕ್ಕೆ ಕಾರಣವಾದರೂ ಏನು, ಇದರಿಂದ ಭಯೋತ್ಪಾದಕರಿಗೆ ಆಗುವ ಲಾಭವಾದರೂ ಏನು ಎಂದು ವಿದ್ಯಾರ್ಥಿಗಳ ಸಮೂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೆಲ ರಾಜಕೀಯ ವ್ಯಕ್ತಿಗಳು ಸ್ವಾರ್ಥ ಲಾಭಕ್ಕಾಗಿ ಮಾಡುತ್ತಿರುವ ಕೆಲಸ ಅತ್ಯಂತ ಹೇಯವಾಗಿದೆ. ಕೆಲವರು ಪ್ರಾದೇಶಿಕ ವಿಚಾರದಲ್ಲಿ ಮುಂದೆ ಮಾಡಿಕೊಂಡು ಬೀದಿಗಿಳಿದರೆ, ಇನ್ನೊಂದು ಸಂಘಟನೆ ಮತಾಂತರ ನೆಪದಲ್ಲಿ ಅನ್ಯ ಧರ್ಮವನ್ನು ಘಾಸಿಗೊಳಿಸುವ ಪ್ರಯತ್ನ ನಡೆಸುತ್ತದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ದೇಶಕ್ಕೆ ಗಂಡಾತರ ತಪ್ಪಿದ್ದಲ್ಲ. ಈಗ ಆಗಿರುವ ತಪ್ಪುನ್ನು ಸರಿಪಡಿಸಿಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಭಾರಿ ಬೆಲೆ ತೆರುವ ದಿನಗಳು ದೂರವಿಲ್ಲ ಎಂದು ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳಾದ ಜಸ್ಟಿನ್ ಪೀಟರ್( ಮೂರನೆ ಬಿಎ) ಸಂದೀಪ್ ( ಮೂರನೆ ಬಿಎಸ್ಸಿ)ಮತ್ತು ಹನ್ನಾ ( ಎರಡನೆ ಬಿಎ) ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications