ಮಹಾರಾಷ್ಟ್ರ ಡಿಸಿಎಂ ಪಾಟೀಲ್ ರಾಜೀನಾಮೆ
ಮುಂಬೈ, ಡಿ. 1 : ಮುಂಬೈ ಸ್ಫೋಟದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಕೇಂದ್ರದ ಗೃಹ ಸ್ಥಾನಕ್ಕೆ ಶಿವರಾಜ್ ಪಾಟೀಲ್ ರಾಜೀನಾಮೆ ನೀಡಿರುವ ಬೆನ್ನಲ್ಲೇ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರೂ ಆಗಿದ್ದ ಆರ್ ಆರ್ ಪಾಟೀಲ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಗ್ರರ ಕೃತ್ಯದ ಕುರಿತು ಲಘುವಾಗಿ ಮಾತನಾಡಿದ್ದು ಪಾಟೀಲ್ ತಲೆದಂಡಕ್ಕೆ ಕಾರಣವಾಗಿದೆ ಎನ್ ಸಿಪಿ ಪಕ್ಷದ ಮೂಲಗಳು ತಿಳಿಸಿವೆ.
ಮುಂಬೈ ಭಯೋತ್ಪಾದನೆಯ ಬಗ್ಗೆ ಹಗುರವಾಗಿ ಮಾತನಾಡಿದ್ದ ಆರ್ ಆರ್ ಪಾಟೀಲ್ , ದೊಡ್ಡ ನಗರಗಳಲ್ಲಿ ಚಿಕ್ಕಪುಟ್ಟ ಘಟನೆಗಳು ಸಾಮಾನ್ಯ. ಉಗ್ರರು ನಡೆಸಿದ ಕೃತ್ಯ ಚಿಕ್ಕದು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಪಾಟೀಲ್ ಹೇಳಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿತ್ತು. ಭಾನುವಾರ ಸಭೆ ಸೇರಿದ ಎನ್ ಸಿಪಿ ನಾಯಕ ಶರದ್ ಪವಾರ್ ಅವರು ಪಾಟೀಲ್ ಹೇಳಿಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷದ ಸದಸ್ಯರೂ ಕೂಡಾ ಪಾಟೀಲ್ ರಾಜೀನಾಮೆ ಪಡೆಯಬೇಕು ಎಂದು ಪವಾರ್ ಮೇಲೆ ಒತ್ತಡ ಹೇರಿದ್ದರು. ಪಕ್ಷದ ಸದಸ್ಯರ ಒತ್ತಡಕ್ಕೆ ಮಣಿದ ಶರದ್ ಪವಾರ್, ಪಾಟೀಲ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರು.
ರಾಜೀನಾಮೆಯ ನಂತರ ಪ್ರತಿಕ್ರಿಯೆ ನೀಡಿರುವ ಆರ್ ಆರ್ ಪಾಟೀಲ್, ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಆರ್ ಆರ್ ಪಾಟೀಲ್ ಎನ್ ಸಿಪಿ ಪಕ್ಷದ ಹಿರಿಯ ನಾಯಕರಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications