ಮೋದಿ ಆಧುನಿಕ ಘಜ್ನಿ ಮೊಹ್ಮದ್:ವಿಎಚ್ ಪಿ
ಅಹಮದಾಬಾದ್, ನ. 21 : ಸಂಘ ಪರಿವಾರದ ಮುಖಂಡರ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ನರೇಂದ್ರ ಮೋದಿ ನಗರದಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ದೇವಸ್ಥಾನ ನೆಲಸಮಗೊಳಿಸುವ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಆದೇಶಿಸಿದ್ದಾರೆ. ಮುಖ್ಯಮಂತ್ರಿಯವರ ಕಚೇರಿಯಿಂದ ಅಧಿಕೃತವಾಗಿ ಈ ಆದೇಶ ಹೊರಬಿದ್ದಿದ್ದು, ಕೆಲ ಸಮಯದವರೆಗೂ ನೆಲಸಮಗೊಳಿಸುವುದನ್ನು ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ಸುಮಾರು 200ಕ್ಕೂ ಹೆಚ್ಚು ದೇವಸ್ಥಾನಗಳನ್ನು ನೆಲಸಮಗೊಳಿಸುವ ಕೆಲಸ ಕೈಹಾಕಿರುವ ಬಿಜೆಪಿ ಸರ್ಕಾರವನ್ನು ವಿಎಚ್ ಪಿ ಸೇರಿ ಸಂಘ ಪರಿವಾರದ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ವಿಶ್ವ ಹಿಂದೂ ಪರಿಷತ್ ಮುಖಂಡ ಅಶೋಕ್ ಶಿಂಘಾಲ್ ಅಂತೂ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದ್ದರು.
ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಅವರು, ಈ ಹಿಂದೆ ಘಜ್ನಿ ಮೊಹ್ಮದ್ ಹಿಂದು ದೇವಾಲಯಗಳನ್ನು ನೆಲಸಮಗೊಳಿಸಿದ್ದ ಇದೀಗ ಮೋದಿ ದೇವಾಲಯಗಳನ್ನು ನೆಲಸಮಗೊಳಿಸಲು ಕೈಹಾಕಿ ಅಧುನಿಕ ಘಜ್ನಿ ಮೊಹ್ಮದ್ ಆಗಿದ್ದಾರೆ ಎಂದು ಕಟು ಶಬ್ಧಗಳನ್ನು ಬಳಸಿ ಟೀಕಿಸಿದ್ದರು. ಬಿಜೆಪಿಯ ಕೆಲ ಹಿರಿಯ ಮುಖಂಡರೂ ಕೂಡಾ ಸರ್ಕಾರದ ಕ್ರಮದ ವಿರುದ್ಧ ತಮ್ಮ ಅಸಮಾಧಾವನ್ನು ತೋಡಿಕೊಂಡಿದ್ದರು.
ಸರ್ಕಾರದ ಆದೇಶದ ಮೇರೆಗ ನೆಲಸಮಗೊಳಿಸುವ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ದೇವಸ್ಥಾನ ನೆಲಸಮಗೊಳಿಸಬೇಕೆಂದು ಗುಜರಾತ ಹೈಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಈ ಕೆಲಸ ಕೈಹಾಕಲಾಗಿದೆ. ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಅನಿವಾರ್ಯವಾಗಿ ನೆಲಸಮ ಕೆಲಸ ಕೈಹಾಕಬೇಕಾಗಿದೆ ಎಂದು ಅವರು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications