ನಗರದಲ್ಲಿ ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಸಿದ್ಧತೆ

ಬೆಂಗಳೂರು, ನ. 20 : ಗೆಲುವಿನ ಅಭಿಯಾನ ಮುಂದುವರೆಸಿರುವ ಧೋನಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಅತಿಥೇಯ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ.23 ರಂದು ನಡೆಯಲಿದೆ. ಪಂದ್ಯದ ಟಿಕೆಟ್ ಗಳ ಮಾರಾಟ ಆರಂಭವಾಗಿದ್ದು, ಟಿಕೆಟ್ ಪಡೆಯಲು ಕ್ರಿಕೆಟ್ ಅಭಿಮಾನಿಗಳು ಮುಗಿಬಿದ್ದಿರುವುದರಿಂದ ನೂಕು ನುಗ್ಗಲು ದೃಶ್ಯ ಸಾಮಾನ್ಯವಾಗಿತ್ತು.

ಬುಧವಾರ ಮಧ್ಯಾಹ್ನದಿಂದಲೇ ಆರಂಭವಾಗಿರುವ ಟಿಕೆಟ್ ಮಾರಾಟದಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರ್ ಸುತ್ತ ನೂರಾರು ಯುವಕರು ಜಮಾಯಿಸಿರುವುದು ಕಂಡು ಬಂದಿತು. ಜತೆಗೆ ಬುಧವಾರ ತಡರಾತ್ರಿವರೆಗೂ ಟಿಕೆಟ್ ಹಂಚಿದ್ದರಿಂದ ರಾತ್ರಿಯೆಲ್ಲ ಕಾದು ಕುಳಿತು ಟಿಕೆಟ್ ಪಡೆದುಕೊಂಡಿದ್ದಾರೆ.

ಇಂದು ಬೆಳಗ್ಗೆ 8 ಗಂಟೆಗೆ ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ಕೊಡಲು ಆರಂಭಿಸಿದಾಗ ನೂಕು ನುಗ್ಗಲು ಆರಂಭವಾಯಿತು. ಸುಮಾರು 20ಸಾವಿರಕ್ಕೂ ಅಧಿಕ ಸಂಖ್ಯೆ ಟಿಕೆಟ್ ಆಕಾಂಕ್ಷಿಗಳು ಕ್ರೀಡಾಂಗಣದ ಟಿಕೆಟ್ ಕೌಂಟರ್ ಬಳಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತು. ಭಾನುವಾರದ ಪಂದ್ಯಕ್ಕೆ ಟಿಕೆಟ್ ಗಳ ಮಾರಾಟ ಭರ್ಜರಿಯಾಗಿ ನಡೆಯತೊಡಗಿದ್ದು, ಇನ್ನೊಂದಡೆ ಬ್ಲಾಕ್ ನಲ್ಲಿ ಡಬಲ್ ಹಣ ತೆತ್ತು ಟಿಕೆಟ್ ಪಡೆಯುತ್ತಿರುವುದು ಕಂಡು ಬಂದಿತು. ನಾಗಪುರದಲ್ಲಿ ನಡೆಯುತ್ತಿರುವ ಮೂರನೇ ಪಂದ್ಯ ಗೆಲುವು ಸಾಧಿಸುತ್ತಿದ್ದಂತೆಯೇ ನೆರೆದಿದ್ದ ಸಾವಿರಾರು ಅಭಿಮಾನಿಗಳು ಕೇಕೆ ಹಾಕಿ ಸಂಭ್ರಮ ಪಟ್ಟರು.

ಬೆಳಗ್ಗೆ ಕಡಿಮೆ ಸಂಖ್ಯೆಯಲ್ಲಿದ್ದ ಟಿಕೆಟ್ ಆಕಾಂಕ್ಷಿಗಳು ಹೊತ್ತೆರುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ಸೇರಿದರು. ಟಿಕೆಟ್ ಕೌಂಟರ್ ಮುಂದೆ ನೂಕು ನುಗ್ಗಲು ಉಂಟಾಗಿ ಅಹಿತಕರ ಘಟನೆ ಸಂಭವಿಸುವ ಮೊದಲೇ ಈ ಸ್ಥಳದಲ್ಲಿ ಪೊಲೀಸ್ ಭದ್ರತೆಯನ್ನು ಒದಗಿಸಲಾಯಿತು. ಜನಸಂದಣಿಯನ್ನು ನಿಭಾಯಿಸಲು ಪೊಲೀಸರು ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಎಸಿಪಿ ಸೇರಿದಂತೆ ಕೆಎಸ್ಆರ್ ಪಿ, ಸಿಎಆರ್ ಪ್ಲಟೂನ್ ಗಳನ್ನು ನಿಯೋಜಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕ್ರೀಡಾಂಗಣದ ಸುತ್ತಮುತ್ತ 200 ಅಧಿಕ ಪೊಲೀಸರು ಸರ್ಪಗಾವಲು ನೇಮಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಎಸ್ ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್, ಭಾರತ ತಂಡ ಕಳೆದ ಮೂರು ಪಂದ್ಯಗಳಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದೆ. ತಂಡದ ಪ್ರಮುಖರು ಉತ್ತಮವಾಗಿ ಅಡುತ್ತಿರುವುದರಿಂದ ಭಾನುವಾರದ ಪಂದ್ಯದ ಟಿಕೆಟ್ ಹೆಚ್ಚು ಬೇಡಿಕೆ ಉಂಟಾಗಿದೆ ಎಂದು ಸ್ಪಷ್ಟಪಡಿಸಿದರು. ಭಾರತ ಮತ್ತು ಇಂಗ್ಲೆಂಡ್ ತಂಡದ ಆಟಗಾರರು ಶುಕ್ರವಾರ ಸಂಜೆ ನಗರಕ್ಕೆ ಆಗಮಿಸಲಿದ್ದಾರೆ. ಆಟಗಾರರು ಉಳಿದುಕೊಳ್ಳುವ ಹೋಟೆಲ್ ಹಾಗೂ ಕ್ರೀಡಾಂಗಣದ ಸುತ್ತಮುತ್ತ ಭಾರಿ ಭದ್ರತೆಯನ್ನು ನಿಯೋಜಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+