ಭಾಷೆಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಕನ್ನಡಿಗ
ಬೆಂಗಳೂರು, ಅ. 20 : ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡದಿದ್ದರೆ ಬೀದಿಗಿಳಿದು ಹೋರಾಡುವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಂದಿರುವುದು ಹಳೇ ಕಥೆ. ನಗರದ ಕನ್ನಡ ಭಾಷಾಭಿಮಾನಿ ಡಿ.ಎನ್.ವೆಂಕಟರಮಣಯ್ಯ ಎಂಬುವವರು ಸರ್ಕಾರ ಮಾಡಬೇಕಾಗಿರುವ ಕೆಲಸವನ್ನು ತಾವೇ ಮಾಡುತ್ತಿದ್ದು, ಸ್ವಂತ ಖರ್ಚಿನಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಮದ್ರಾಸ್ ಹೈಕೋರ್ಟಿನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ತಮ್ಮನ್ನು ಪ್ರತಿವಾದಿಯನ್ನಾಗಿ ಮಾಡಬೇಕೆಂದು ಕೋರಿ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿದೆ. ಈಗ ಅವರು 11 ನೇ ಪ್ರತಿವಾದಿಯಾಗಿದ್ದಾರೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆಯಲಿದೆ ಎನ್ನುವ ಹೊತ್ತಿಗೆ ಕಳೆದ ಅ.4 ರಂದು ಚೆನ್ನೈ ನ ಹಿರಿಯ ವಕೀಲ ಆರ್. ಗಾಂಧಿ ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು. ಈಗಾಗಲೇ ರಚನೆಯಾಗಿರುವ ಸಮಿತಿ ಅಸಮರ್ಪಕವಾಗಿದ್ದು, ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಮಿತಿ ರಚಿಸಬೇಕೆಂಬ ಬೇಡಿಕೆ ಮುಂದಿರಿಸಿದ್ದಾರೆ. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಎಫ್.ಎಂ.ಇಬ್ರಾಹಿಂ ಖಲೀಪುಲ್ಲಾ ವಿಚಾರಣೆಯನ್ನು ನ.2ಕ್ಕೆ ಮುಂದೂಡಿದ್ದಾರೆ. ಬ್ಯಾಂಕ್ ಆಫ್ ಮೈಸೂರಿನ ವ್ಯವಸ್ಥಾಪಕರಾಗಿದ್ದ ವೆಂಕಟರಾಮಯ್ಯ ಇದೀಗ ನಿವೃತ್ತ ಜೀವನ ನಡೆಸುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಜನಸೇವೆಗಾಗಿ ಜಯ ಕರ್ನಾಟಕ












Click it and Unblock the Notifications