ಭಾರತೀಯ ಮೂಲದ ವ್ಯಕ್ತಿಯಿಂದ ಇಡೀ ಕುಟುಂಬದ ಹತ್ಯೆ
ಲಾಸ್ ಏಂಜೆಲೀಸ್, ಅ. 7 : ತೀವ್ರ ಹಣಕಾಸು ಮುಗ್ಗಟ್ಟಿಗೆ ಒಳಗಾಗಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಾವಿದ್ದ ಪರಿಸ್ಥಿತಿಯಿಂದ ಮುಕ್ತರಾಗಲು ಇಡೀ ಕುಟುಂಬವನ್ನು ಹತ್ಯೆಗೈದು ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಹಣಕಾಸು ಕ್ಷೇತ್ರದಲ್ಲಿ ಎಂಬಿಎ ಪದವಿ ಪಡೆದಿದ್ದ 45ರ ಹರೆಯದ ಕಾರ್ತಿಕ್ ರಾಜಾರಾಮ್ ಎಂಬುವವರು ತನ್ನ ಅತ್ತೆ ಇಂದಿರಾ ರಾಮಶೇಶಮ್ (69), 39 ವಯಸ್ಸಿನ ಹೆಂಡತಿ ಶುಭಶ್ರೀ, 19ಹ ಹರೆಯದ ಕೃಷ್ಣ, 12 ವಯಸ್ಸಿನ ಗಣೇಶ ಮತ್ತು 7 ವಯಸ್ಸಿನ ಅರ್ಜುನರನ್ನು ಎರಡಂತಸ್ತಿನ ಮನೆಯಲ್ಲಿ ಗುಂಡಿಟ್ಟು ಕೊಂದಿದ್ದಾರೆ. ನಂತರ ತಾವೂ ಗಣೇಶ್ ಮತ್ತು ಅರ್ಜುನ್ ಅವರಿದ್ದ ಕೋಣೆಯಲ್ಲಿಯೇ ಗಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವರಿಗೆ ಅನೇಕ ಬಾರಿ ಗುಂಡಿಟ್ಟು ಸಾಯಿಸಲಾಗಿದೆ.
ಪ್ರೈಸ್ ವಾಟರ್ ಹೌಸ್ ಮುಂತಾದ ಪ್ರತಿಷ್ಠಿತ ಕಂಪನಿಯಲ್ಲಿ ಕಾರ್ತಿಕ್ ಮೊದಲು ಕೆಲಸ ಮಾಡಿದ್ದರೂ ಕಳೆದ ಕೆಲ ತಿಂಗಳುಗಳಿಂದ ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದರು. ಲಂಡನ್ ಮೂಲದ ಕಂಪನಿಯ ಕೆಲಸ ಅವರನ್ನು ಸುಸ್ಥಿತಿಯಲ್ಲಿಟ್ಟಿದ್ದರೂ ನಂತರ ಆ ಕೆಲಸ ಕಳೆದುಕೊಂಡಿದ್ದರು. ಆಮೇಲೆ ಅವರನ್ನು ಅದೃಷ್ಟ ಕೈಹಿಡಿಯಲೇ ಇಲ್ಲ. ಗಳಿಸಿದ್ದೆಲ್ಲವನ್ನು ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿದ್ದು ಅವರನ್ನು ದಿವಾಳಿಯೆಬ್ಬಿಸಿತು. ಹೂಡಿದ್ದು ಎಷ್ಟು, ಕಳೆದುಕೊಂಡಿದ್ದು ಹೇಗೆ ಎಂಬ ಬಗ್ಗೆ ವಿವರ ಇನ್ನೂ ತಿಳಿದುಬಂದಿಲ್ಲ.
ಹತ್ಯೆಗಳು ಶನಿವಾರವೇ ಸಂಭಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಕೊಲೆ ನಡೆದಿರುವುದು ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ನೆರೆಹೊರೆಯವರಿಗೆ ಗುಂಡು ಹಾರಿಸಿದ ಶಬ್ದಗಳೂ ಕೇಳಿಬಂದಿಲ್ಲ. ಲಾಸ್ ಏಂಜಲೀಸ್ ನಿಂದ 20 ಕಿ.ಮೀ. ದೂರದಲ್ಲಿರುವ ಪೋರ್ಟರ್ ರಾಂಚ್ ಮನೆಯಲ್ಲಿ ಅವರು ಕಳೆದ ಒಂದು ವರ್ಷದಿಂದ ವಾಸವಾಗಿದ್ದರು.
ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿರುವ ಕೋಣೆಯಲ್ಲಿ ಮೂರು ಪತ್ರಗಳು ಪೊಲೀಸರಿಗೆ ದೊರೆತಿವೆ. ಒಂದು ಪತ್ರದಲ್ಲಿ ಎಲ್ಲ ಕೊಲೆಗಳಿಗೆ ತಾವೇ ಹೊಣೆಗಾರ ಎಂದು ಕಾರ್ತಿಕ್ ಹೇಳಿಕೊಂಡಿದ್ದಾರೆ. ಎರಡನೆಯದು ಸ್ನೇಹಿತರಿಗೆ ಮತ್ತು ಸಂಬಂಧಿಗಳಿಗೆ ಬರೆದ ಪತ್ರ. ಮತ್ತು ಮೂರನೆಯದು ಉಯಿಲು. ತಾವು ತೀವ್ರ ಹಣಕಾಸಿನ ಸಂಕಷ್ಟದಲ್ಲಿ ಇದ್ದಿರುವುದಾಗಿ ಅವರು ಪತ್ರದಲ್ಲಿ ಹೇಳಿಕೊಂಡಿದ್ದಾರೆ.
(ಏಜೆನ್ಸೀಸ್)












Click it and Unblock the Notifications