ವಿಜಯನಗರ ಜಿಲ್ಲೆ ಬಂದ್ ಗೆ ಉತ್ತಮ ಬೆಂಬಲ
ಹೊಸಪೇಟೆ, ಸೆ. 30 : ವಿಜಯನಗರ ಜಿಲ್ಲೆ ರಚನೆಗೆ ಆಗ್ರಹಿಸಿ ಶಾಸಕ ಆನಂದ್ ಸಿಂಗ್ ನೇತೃತ್ವದಲ್ಲಿ ವಿಜಯನಗರ ಜಿಲ್ಲಾ ಹೋರಾಟ ಸಮಿತಿ ನೀಡಿದ್ದ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿರುವ ಸ್ಥಳೀಯರು ಬಂದ್ ಗೆ ವ್ಯಾಪಕ ಬೆಂಬಲ ಸೂಚಿಸಿದ್ದಾರೆ.
ಗುಲ್ಬರ್ಗಾದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಯಾದಗಿರಿ ಜಿಲ್ಲೆಯನ್ನಾಗಿ ಘೋಷಿಸಿದ ಬೆನ್ನಲ್ಲೇ ವಿಜಯನಗರ ಜಿಲ್ಲೆಯನ್ನು ಘೋಷಣೆ ಮಾಡಬೇಕು ಎಂದು ಸಮಿತಿ ಒತ್ತಾಯಿಸಿ ಬಂದ್ ಗೆ ಕರೆ ನೀಡಿದೆ. ವಿಜಯನಗರವನ್ನು ಜಿಲ್ಲೆಯಾಗಿಸಬೇಕೆಂದು ಆಗ್ರಹಿಸಿ ವಿಜಯನಗರ ಹೋರಾಟ ಸಮಿತಿಯ ನೂರಾರು ಕಾರ್ಯಕರ್ತರು ಇಂದು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಆರ್ಥಿಕವಾಗಿ ಸಾಕಷ್ಟು ಪ್ರಬಲವಾಗಿರುವ ಹೊಸಪೇಟೆಗೆ ಜಿಲ್ಲೆಯ ಭಾಗ್ಯವನ್ನು ನೀಡಬೇಕು. ಕಳೆದ ಅನೇಕ ದಿನಗಳಿಂದ ಹೊಸಪೇಟೆ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಸರ್ಕಾರದ ಕಣ್ಣು ತೆರೆಸಲು ಬಂದ್ ಕರೆ ನೀಡಲಾಗಿದೆ. ಕೂಡಲೇ ಹೊವಿನ ಹಡಗಲಿ, ಕೂಡ್ಲಗಿ, ಸಂಡೂರು, ಹಗರಿ ಬೊಮ್ಮನಹಳ್ಳಿ ತಾಲ್ಲೂಕುಗಳನ್ನು ಸೇರಿಸಿ ವಿಜಯನಗರ ಜಿಲ್ಲೆಯನ್ನಾಗಿ ರೂಪಿಸಿ ಘೋಷಣೆ ಮಾಡಬೇಕು ಎಂದು ಹೊಸಪೇಟೆ ಬಿಜೆಪಿ ಶಾಸಕ ಆನಂದ ಸಿಂಗ್ ಹೇಳಿದ್ದಾರೆ.
ಬಂದ್ ಕರೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಬಂದ್ ಶಾಂತಿಯುತವಾಗಿ ನಡೆದಿದ್ದು, ಈ ವರೆಗೂ ಯಾವುದೇ ಅಹಿತಕರ ಘಟನೆಗಳು ಜರುಗಿಲ್ಲ. ಸೂಕ್ಷ್ಮಪ್ರದೇಶದಲ್ಲಿ ಹೆಚ್ಚಿನ ಗಮನ ಹರಿಸಿದ್ದು, ಕಣ್ಗಾವಲು ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನ ವಾರ್ತೆ)
ಕಲ್ಯಾಣ ಕರ್ನಾಟಕಕ್ಕೆ ಬಂಪರ್ ಕೊಡುಗೆ












Click it and Unblock the Notifications