ಸ್ಪೀಡ್ ಗವರ್ನರ್ ವಿಚಾರಣೆ ಮುಂದೂಡಿಕೆ
ನವದೆಹಲಿ, ಸೆ. 30 : ವಾಣಿಜ್ಯ ಬಳಕೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ಪ್ರಕರಣವನ್ನು ಇದೇ ಡಿಸೆಂಬರ್ ತಿಂಗಳವರೆಗೆ ಮುಂದೂಡಿದೆ. ಈ ಮೂಲಕ ಲಾರಿ ಮಾಲೀಕರು ಹಾಗೂ ಸರ್ಕಾರ ನಡುವಿನ ಮುಸುಕಿನ ಗುದ್ದಾಟಕ್ಕೆ ತಾತ್ಕಾಲಿಕ ತಡೆಬಿದ್ದಂತಾಗಿದೆ. ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದ್ದರಿಂದ ಸೆ. 30 ರ ಮಧ್ಯರಾತ್ರಿಯಿಂದ ನಡೆಸಲು ಉದ್ದೇಶಿಸಲಾಗಿದ್ದ ಲಾರಿ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ಲಾರಿ ಮಾಲೀಕರ ಹಾಗೂ ಏಜಂಟ್ ರ ಒಕ್ಕೂಟ ತಿಳಿಸಿದೆ.
ವೇಗ ನಿಯಂತ್ರಕವನ್ನು ಇಡೀ ಸಾರಿಗೆ ಉಧ್ಯಮ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಆದೇಶವನ್ನು ವಾಪಸ್ಸು ಪಡೆಯಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಆರ್. ಅಶೋಕ್ ಇನ್ನೊಂದು ಸಾರಿ ಕೂಲಂಕಷವಾಗಿ ಚರ್ಚೆ ನಡೆಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ಲಾರಿ ಮಾಲೀಕರ ಹಾಗೂ ಏಜಂಟ್ ರ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಒತ್ತಾಯಿಸಿದ್ದಾರೆ. ಸುಪ್ರಿಂ ಕೋರ್ಟ್ ವಿಚಾರಣೆಯನ್ನು ಡಿಸೆಂಬರ್ ತಿಂಗಳಿಗೆ ಮುಂದೂಡುತ್ತಿದ್ದಂತೆಯೇ ತಮ್ಮನ್ನು ರಾಜ್ಯ ಸರ್ಕಾರ ಮಾತುಕತೆ ಆಹ್ವಾನಿಸಿದೆ. ಸರ್ಕಾರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಇಟ್ಟಿರುವ ಹೆಜ್ಜೆ ಸ್ವಾಗತಾರ್ಹ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದ್ದು. ವೇಗ ನಿಯಂತ್ರಕ ಅಳವಡಿಕೆ ವಿಷಯ ಸರ್ಕಾರ ಮತ್ತು ಲಾರಿ ಮಾಲೀಕರ ಸಂಘಕ್ಕೆ ಬಿಟ್ಟಿರುವ ವಿಷಯ. ಆದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಮಾಲೀಕರೊಂದಿಗೆ ಚರ್ಚಿಸಿ ಸೂಕ್ತ ರೀತಿಯಲ್ಲಿ ತೀರ್ಮಾನಿಸಿ ಎಂದು ನ್ಯಾಯಾಲಯ ಸರ್ಕಾರಕ್ಕೆ ಕಿವಿ ಮಾತು ಹೇಳಿದೆ. ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳಡಿಸುವಂತೆ ಕೇಂದ್ರ ಸರ್ಕಾರ 2003ರಲ್ಲಿ ಎಲ್ಲ ರಾಜ್ಯಗಳಿಗೆ ಸ್ವತಂತ್ರ ಅಧಿಕಾರ ನೀಡಿ ನಿರ್ದೇಶನ ಕೊಟ್ಟಿತ್ತು.
(ದಟ್ಸ್ ಕನ್ನಡ ವಾರ್ತೆ)
ವೇಗ ನಿಯಂತ್ರಕ ತಿಕ್ಕಾಟ: ಟ್ರಕ್ ಗಳ ಮುಷ್ಕರ












Click it and Unblock the Notifications