ಜನಾರ್ದನರೆಡ್ಡಿ ಮೇಲೆ ಕಳ್ಳತನದ ಆರೋಪ
ಬಳ್ಳಾರಿ, ಸೆ. 29 : ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಹಾಗೂ ಟಿಎನ್ಆರ್ ಮೈನ್ಸ್ ನ ಮಾಲಿಕ ಟಪಾಲು ಚಂದ್ರಶೇಖರ್ ಅವರ ನಡುವಿನ ಸಂಘರ್ಷ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ವಿವಾದಿತ ತುಮಟಿ ಗಣಿ ಪ್ರದೇಶಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಎಂ.ದಿವಾಕರ್ ಬಾಬು ಅವರ ಬಂಧನ ಮತ್ತು ಬಿಡುಗಡೆ ಪ್ರಹಸನದ ನಂತರ ಇಂದು ಟಪಾಲು ಚಂದ್ರಶೇಖರ್ ತಮ್ಮ ಒಡೆತನದ ಫೋಕ್ ಲೈನ್ ಒಂದನ್ನು ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಕಳ್ಳತನ ಮಾಡಿದ್ದಾರೆ ಎಂದು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಭಾನುವಾರ ರಾತ್ರಿ ನಮ್ಮ ಒಡೆತನ ಫೋಕ್ ಲೈನ್ ಕಳ್ಳತನ ಮಾಡಲಿಕ್ಕೆ ಜನಾರ್ದನ ರೆಡ್ಡಿ ತಮ್ಮ ಕಡೆಯ ಜನರಿಗೆ ಕುಮ್ಮಕ್ಕು ನೀಡಿದ್ದಾರೆ. ಅವರ ಕುಮ್ಮಕ್ಕಿನಿಂದಲೇ ಫೋಕ್ ಲೈನ್ ಕಳುವು ಮಾಡಿಕೊಂಡು ಹೋಗಲಾಗಿದೆ ಎಂದು ಟಪಾಲು ಚಂದ್ರಶೇಖರ್ ಆರೋಪಿಸಿದ್ದಾರೆ. ರೆಡ್ಡಿ ಮತ್ತು ಟಪಾಲು ಕಂಪನಿ ನಡುವಿನ ಜಿದ್ದಾಜಿದ್ದಿಯಲ್ಲಿ ಕಾಂಗ್ರೆಸ್ ನಾಯಕ ಎಂ.ದಿವಾಕರ್ ಬಾಬು ಪ್ರವೇಶವಾಗಿದ್ದು, ಸಮಸ್ಯೆ ಮತ್ತಷ್ಟು ಜಟಿಲವಾಗಿದೆ. ಗಣಿ, ಗಡಿ ಹಾಗೂ ರಾಜಕೀಯ ಸೇರಿದ್ದರಿಂದ ಸಮಸ್ಯೆ ಶೀಘ್ರ ಇತ್ಯರ್ಥವಾಗುವ ಲಕ್ಷಣಗಳು ಕಾಣುತ್ತಿಲ್ಲ.
ದಿವಾಕರ್ ಬಾಬು ಬಂಧನ ಪ್ರಹಸನ
ವಿವಾದಿತ ತುಮಟಿ ಗಣಿ ಪ್ರದೇಶಕ್ಕೆ ನಿಷೇಧಾಜ್ಞೆ ಉಲ್ಲಂಘಿಸಿ ಭೇಟಿ ನೀಡಿದ್ದ ಮಾಜಿ ಸಚಿವ ಎಂ. ದಿವಾಕರ್ ಬಾಬು, ಟಿಎನ್ಆರ್ ಮೈನ್ಸ್ ನ ಟಪಾಲು ಗಣೇಶ್ ಹಾಗೂ ಜನತಾ ಬಜಾರ್ ಮಾಜಿ ಅಧ್ಯಕ್ಷ ಜಯಂಗೋಪಿನಾಥ್ ಸೇರಿದಂತೆ ಐವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ಘಟನೆ ಭಾನುವಾರ ನಡೆದಿತ್ತು.
(ದಟ್ಸ್ ಕನ್ನಡ ವಾರ್ತೆ)
ಬಳ್ಳಾರಿ: ದಿವಾಕರಬಾಬು ಬಂಧನ, ಬಿಡುಗಡೆ












Click it and Unblock the Notifications