ಅಹಮದಾಬಾದ್ ನಲ್ಲಿ 17 ನಾಡ ಬಾಂಬ್ ವಶ
ಅಹಮದಾಬಾದ್, ಸೆ. 29 : ಬಾಂಬ್ ಸ್ಫೋಟಗಳ ಹಾವಳಿ ದೇಶದ ಜನರಲ್ಲಿ ತೀವ್ರ ಆತಂಕ ಹುಟ್ಟಿಸಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ದೇಶದ ವಿವಿಧೆಡೆ ನಾಲ್ಕು ದಿಕ್ಕುಗಳಲ್ಲಿ ಬಾಂಬ್ ಸ್ಫೋಟಿಸುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ. ದೇಶದ ಹೃದಯ ಭಾಗ ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸಿ ರಣಕೇಕೆ ಹಾಕಿರುವ ಉಗ್ರರ ಕೃತ್ಯಕ್ಕೆ ಖಂಡಿತವಾಗಿಯೂ ತಡೆ ಬೇಕಿದೆ. ಇಂದು ಇಲ್ಲಿ 17 ಜೀವಂತ ಬಾಂಬ್ ಪತ್ತೆಯಾಗಿದೆ.
ವಾರಾಣಾಸಿ, ಹೈದರಾಬಾದ್, ಜೈಪುರ, ಬೆಂಗಳೂರು, ಅಹಮದಾಬಾದ್, ಎರಡು ಭಾರಿ ದೆಹಲಿಯಲ್ಲಿ ಬಾಂಬ್ ಸ್ಫೋಟಿಸುವ ಮೂಲಕ ಉಗ್ರರು ವಿರಾಟ ನೆಗೆಬೀರಿದ್ದರು. ನೂರಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಇನ್ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಬಾಂಬ್ ಸ್ಫೋಟಕ್ಕೆ ದೇಶ ತಲ್ಲಣಿಸಿತ್ತು. ಅದೆಲ್ಲವೂ ಹಸಿರಿರುವಾಗಲೇ ಉಗ್ರರು ಇಂದು ಅಹಮದಾಬಾದ್ ನಗರದ ಮೇಲೆ ಮತ್ತೆ ಕರಾಳ ಹಸ್ತವನ್ನು ಚಾಚಿದ್ದಾರೆ. ನಗರದ ವಿವಿಧೆಡೆ ಕಸದ ತೊಟ್ಟಿಯಲ್ಲಿ ಇಡಲಾಗಿದ್ದ 17 ಜೀವಂತ ನಾಡ ಬಾಂಬ್ ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ತಮ್ಮ ಚಾಕಚಕ್ಯತೆಯನ್ನು ಮೆರೆದಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ನಾಡ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾಂತಿ ಸಮಾಧಾನ ಕಾಪಾಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರು ಸ್ಫೋಟದ ಮರುದಿನ ಅಹಮದಾಬಾದ್ ನಗರದ ವಿವಿಧೆಡೆ ಸುಮಾರು 17 ಕಡೆಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. 60 ಹೆಚ್ಚು ಜನ ಸಾವನ್ನಪ್ಪಿದ್ದರು. 100 ಹೆಚ್ಚು ಜನ ಗಾಯಗೊಂಡಿದ್ದರು. ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಕೃತ್ಯದ ಹೊಣೆ ಹೊತ್ತುಕೊಂಡಿತ್ತು.
(ದಟ್ಸ್ ಕನ್ನಡ ವಾರ್ತೆ)
ದೆಹಲಿ ಸ್ಫೋಟ, ಇಬ್ಬರು ಶಂಕಿತರ ಬಂಧನ
ದಕ್ಷಿಣ ದೆಹಲಿ ಹೂಮಾರುಕಟ್ಟೆಯಲ್ಲಿ ರಕ್ತದೋಕುಳಿ












Click it and Unblock the Notifications