ಲೈಂಗಿಕ ಕಾರ್ಯಕರ್ತರಿಗೆ ವಿಶೇಷ ಕಾರ್ಯಕ್ರಮ
ಮೈಸೂರು, ಸೆ.20: ಲೈಂಗಿಕ ಕಾರ್ಯಕರ್ತರ ಬಾಳಿನಲ್ಲಿ ಬೆಳಕು ತರಲು ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ವಿಶೇಷ ಸ್ಯಾಟಲೈಟ್ ಕಾರ್ಯಕ್ರಮವನ್ನು ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಕೇಂದ್ರ ದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಎನ್ ಜಿಒಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಕರ್ನಾಟಕ ಆರೋಗ್ಯಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಏಡ್ಸ್ ನಿಯಂತ್ರಣ ಸಂಘಗಳು ಜಂಟಿಯಾಗಿ ಹಮ್ಮಿಕೊಂಡಿದ್ದವು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಸ್ಥಳಗಳಿಂದ ಬಂದಿದ್ದ 1 ಲಕ್ಷಕ್ಕೂ ಅಧಿಕ ಲೈಂಗಿಕ ಕಾರ್ಯಕರ್ತರು ಹಾಗೂ ಅವರ ಮಕ್ಕಳು ಭಾಗವಹಿಸಿ ವಿವಿಧ ಯೋಜನೆಗಳ ಬಗ್ಗೆ ತಿಳಿದುಕೊಂಡರು.
ದೇಶದಲ್ಲಿ ಇದೇ ಮೊದಲ ಬಾರಿಗೆ ಲೈಂಗಿಕ ಕಾರ್ಯಕರ್ತರ ಬಾಳನ್ನು ಹಸನಾಗಿಸಲು ಸ್ಯಾಟಲೈಟ್ ಮೂಲಕ ಆಯೋಜಿಸಿದ್ದ ಕಾರ್ಯಕ್ರಮ ಇದಾಗಿತ್ತು. ''ಕಾರ್ಯಕ್ರಮದಲ್ಲಿ ಏಡ್ಸ್ ಬಗೆಗಿನ ಮಾಹಿತಿಗೆ ಲೈಂಗಿಕ ಕಾರ್ಯಕರ್ತರ ಪ್ರತಿಕ್ರಿಯೆ ಅದ್ಭುತವಾಗಿತ್ತು. ಕಾರ್ಯಕ್ರಮಕ್ಕೆ ರಾಜ್ಯದ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಲೈಂಗಿಕ ಕಾರ್ಯಕರ್ತರು ಆಗಮಿಸಿದ್ದು ನೋಡಿ ನಮಗೆ ತುಂಬಾ ಖುಷಿಯಾಗಿದೆ. ಏಡ್ಸ್ ಮಾರಿ ನಿಯಂತ್ರಣಕ್ಕೆ ಅವರು ಕೊಟ್ಟ ಕೊಡುಗೆಗೆ ಬೆಲೆ ಕಟ್ಟಲಾಗದು'' ಎಂದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಪ್ರಧಾನ ನಿರ್ದೇಶಕಿ ಸುಜಾತಾ ರಾವ್ ತಿಳಿಸಿದರು. ಇಸ್ರೊ ಸಂಸ್ಥೆಯ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications