ದಿಟ್ಟ ಪೊಲೀಸ್ ಅಧಿಕಾರಿ ಶರ್ಮಾಗೆ ನಮನ
ನವದೆಹಲಿ, ಸೆ.20: ಶುಕ್ರವಾರ ನಡೆದದೆಹಲಿ ಎನ್ ಕೌಂಟರಿನಲ್ಲಿ ಉಗ್ರರ ಗುಂಡಿಗೆ ಬಲಿಯಾದ ದಿಟ್ಟ ಪೊಲೀಸ್ ಅಧಿಕಾರಿ ಮೋಹನ್ ಚಂದ್ ಶರ್ಮಾ(43) ಅವರಿಗೆ ಶನಿವಾರ ಅಂತಿಮ ನಮನ ಸಲ್ಲಿಸಲಾಯಿತು.
ಸೆ.19ರಂದು ದೆಹಲಿಯ ಜಾಮಿಯಾ ನಗರ್ ನಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸ್ ತಂಡದ ನೇತೃತ್ವ ವಹಿಸಿದ್ದ ಶರ್ಮಾ ಅವರು ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.ಶರ್ಮಾ ನೇತೃತ್ವದ ತಂಡ ಇಬ್ಬರು ಉಗ್ರರನ್ನು ಶುಕ್ರವಾರ ನೆಲಕ್ಕುರುಳಿಸಿತ್ತು.
ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಶರ್ಮಾ ಅವರಿಗೆ 7 ಬಾರಿ ಶೌರ್ಯ ಪ್ರಶಸ್ತಿ ದೊರಕಿದೆ. ಎನ್ ಕೌಂಟರ್ ನಲ್ಲಿ ಹಲವಾರು ಬಾರಿ ಗಾಯಗೊಂಡಿದ್ದ ಶರ್ಮಾ ಅವರು ಶುಕ್ರವಾರ ನಡೆದ ಎನ್ ಕೌಂಟರ್ ನಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.ಎಡ ತೋಳು, ಹೊಟ್ಟೆಯ ಮೇಲ್ಭಾಗ, ಭುಜ ಹಾಗೂ ಪೃಷ್ಠ ಭಾಗಗಳಲ್ಲಿ ಬುಲೆಟ್ ಗಳು ಹೊಕ್ಕಿ ಅವರನ್ನು ಘಾಸಿಗೊಳಿಸಿದ್ದವು. ಚಿಕಿತ್ಸೆ ಫಲಕಾರಿಯಾಗದೆ ಶರ್ಮಾ ಅವರು ಸಾವಿಗೆ ಶರಣಾದರು.
ಪೊಲೀಸ್ ಅಧಿಕಾರಿ ಶರ್ಮಾ ಅವರ ನಿಧನಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ತೀವ್ರ ಸಂತಾಪ ಸೂಚಿಸಿದ್ದಾರೆ. '' ಶರ್ಮಾ ಅವರು ದಕ್ಷ ಅಧಿಕಾರಿಯಾಗಿದ್ದು ತಮ್ಮ ವೃತ್ತಿ ಜೀವನದ ಉದ್ದಕ್ಕೂ ಪರಾಕ್ರಮ ಮೆರೆದಿದ್ದಾರೆ. ಅವರ ಸಾವು ದೇಶ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ'' ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಎಲ್.ಕೆ.ಅಡ್ವಾಣಿ ಸೇರಿದಂತೆ ಹಲವಾರು ಗಣ್ಯರು ಶನಿವಾರ ಅಂತಿಮ ನಮನ ಸಲ್ಲಿಸಿದರು.
(ಏಜೆನ್ಸೀಸ್)
ದಿಲ್ಲಿಯಲ್ಲಿ ಉಗ್ರರೊಂದಿಗೆ ಎನ್ ಕೌಂಟರ್












Click it and Unblock the Notifications