ಅಮೆರಿಕದಲ್ಲಿ ಅಂಧ್ರ ಮೂಲದ ವಿದ್ಯಾರ್ಥಿನಿ ಕೊಲೆ
ಸಿಕಂದರಾಬಾದ್, ಸೆ. 16 : ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹೈದರಾಬಾದ್ ಮೂಲದ ವಿದ್ಯಾರ್ಥಿನಿಯೂಬ್ಬರನ್ನು ಅಮೆರಿಕದ ಶಿಕಾಗೋ ನಗರದಲ್ಲಿ ಆಗಂತುಕರು ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಭಾನುವಾರ ಜರುಗಿದೆ.
ನಿರ್ಮಲ ಮಂಡಲ ಜಿಲ್ಲೆಯ ಮುನಿಯಾಲ್ ಗ್ರಾಮದ ಸೌಮ್ಯ ರೆಡ್ಡಿ ಕೊಲೆಯಾಗಿರುವ ದುರ್ದೈವಿ. 2007ರಲ್ಲಿ ಬಿ.ಇ ಪದವಿ ಪಡೆದುಕೊಂಡಿದ್ದ ಸೌಮ್ಯ, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿನ ದಕ್ಷಿಣ ಇಲಿನಾಯ್ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ವಿಭಾಗದಲ್ಲಿ ಎಂಎಸ್ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ಅಪರಿಚಿತರು ಸೌಮ್ಯ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಭಾನುವಾರ ಸೌಮ್ಯ ಕೊಲೆಯಾಗಿರುವ ವಿಚಾರ ಅವರ ಕುಟುಂಬದವರಿಗೆ ಸೋಮವಾರ ತಿಳಿದಿದೆ. ಕೊಲೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ ಎಂದು ಆದಿಲ್ ಬಾದ್ ಪೊಲೀಸ್ ವರಿಷ್ಠ ಅನಿಲ್ ಕುಮಾರ್ ಹೇಳಿದ್ದಾರೆ. ವಿದ್ಯಾಭ್ಯಾಸದ ಸಲುವಾಗಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಸೌಮ್ಯ ತನ್ನ ಸಹೋದರಿ ಸಹಜಾ ಜೊತೆಗೆ ಅಮೆರಿಕಾಗೆ ತೆರಳಿದ್ದರು.
ಸೌಮ್ಯ ಸೇರಿದಂತೆ ಇದುವರೆಗೂ ಆಂಧ್ರಪ್ರದೇಶದ ನಾಲ್ಕು ವಿದ್ಯಾರ್ಥಿಗಳು ಅಮೆರಿಕದಲ್ಲಿ ಹತ್ಯೆಗೀಡಾಗಿದ್ದಾರೆ. ಈ ಮೊದಲು ಶ್ರೀನಿವಾಸ, ಕಿರಣ್ ಕುಮಾರ್, ಚಂದ್ರಶೇಖರ್ ರೆಡ್ಡಿ ಕೊಲೆಯಾಗಿರುವ ವಿದ್ಯಾರ್ಥಿಗಳಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications