ಬಿಹಾರ ಸಂತ್ರಸ್ತರಿಗೆ ಸಹಾಯ ಹಸ್ತಚಾಚೋಣ ಬನ್ನಿ
'ಕಣ್ಣೀರ ನದಿ ಕೋಸಿ' ಬಿಹಾರದಲ್ಲಿ 30ಲಕ್ಷಕ್ಕೂ ಅಧಿಕ ಜನರನ್ನು ಅತಂತ್ರರಾಗಿಸಿ ಕಣ್ಣೀರ ಕೋಡಿಯನ್ನೇ ಹರಿಸಿದೆ. ನದಿ ಪಾತ್ರ ಬದಲಾಗಿ ಅಲ್ಲಿನ 16 ಜಿಲ್ಲೆಗಳಲ್ಲಿ ಜಲಪ್ರಳಯ ಉಂಟಾಗಿದೆ. ತುತ್ತು ಅನ್ನಕ್ಕಾಗಿ, ಹನಿ ನೀರಿಗೆ, ಸೂರಿಗೆ ಅಲ್ಲಿ ಹಾಹಾಕಾರ. ಮಕ್ಕಳು, ವೃದ್ಧರು, ಮಹಿಳೆಯರ ಪಾಡು ನಿಜಕ್ಕೂ ಶೋಚನೀಯ. ಮನೆ ಮಠ ಕಳೆದುಕೊಂಡ ನಿರಾಶ್ರಿತರಾದವರು ಸಂತ್ರಸ್ತರ ಶಿಬಿರಗಳಲ್ಲಿ ಪರದೇಶಿಗಳಂತೆ ಕಾಲ ಕಳೆಯುತ್ತಿದ್ದಾರೆ.
ಕೋಸಿ ನದಿಯ ಪ್ರವಾಹದಿಂದ ಉಂಟಾಗಿರುವ ಅತಿವೃಷ್ಟಿಯಿಂದ ಸಂತ್ರಸ್ತರಾಗಿರುವ ಜನರಿಗೆ ಪುನರ್ವಸತಿ ಕಲ್ಪಿಸಲು ದೇಶದ ಮಹಾಜನತೆ ಉದಾರ ಮನೋಬಾವದಿಂದ ಸಹಾಯ ಹಸ್ತ ಚಾಚಬೇಕು ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಿಸರ್ಗ ಮತ್ತು ಮಾನವ ನಿರ್ಮಿತ ಸಂಕಷ್ಟಗಳ ಸರಮಾಲೆಯಲ್ಲಿ ಮಾನವನ ಬದುಕು ಅತಂತ್ರವಾಗಿದೆ. ಬಿಹಾರದಲ್ಲಿ ಹಿಂದೆಂದೂ ಕಂಡುಬರದ ರಾಷ್ಟ್ರೀಯ ದುರಂತ ಇದಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ದೇಶಬಾಂಧವರು ನೆರವಿನ ಮಹಾಪೂರ ಹರಿಸುತ್ತಿದ್ದಾರೆ. ಅಸಂಖ್ಯ ಜನರ ನೆರವಿಗೆ ಮಾನವೀಯತೆಯ ಹಸ್ತ ಚಾಚುತ್ತಿದ್ದಾರೆ. ಈ ಮಾನವೀಯ ಕಾರ್ಯದಲ್ಲಿ 'ದಟ್ಸ್‌ಕನ್ನಡ' ಓದುಗರು ಕೈಜೋಡಿಸಬೇಕು ಎಂಬುದು ನಮ್ಮ ವಿನಮ್ರ ಮನವಿ.
ನೀವು ನೀಡುವ ಪ್ರತಿ ರುಪಾಯಿಯೂ ಸಂತ್ರಸ್ತರ ಜೀವನಕ್ಕೆ ಆಶಾಕಿರಣವಾಗಲಿದೆ. ಕೋಸಿ ನದಿಯ ಆರ್ಭಟಕ್ಕೆ ಮನೆ ಮಠ ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿ ಜೀವನ ಸಾಗಿಸುತ್ತಿರುವ ಜನರಿಗೆ ದೇಶದ ಪ್ರತಿಯೊಬ್ಬರು ಸ್ಪಂದಿಸಲೆಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಾಗೋಣ. ಸೂರು ಕಳೆದುಕೊಂಡು ಅತಂತ್ರರಾಗಿರುವ ಜನರಿಗೆ ನಮ್ಮ ಕೈಲಾದಷ್ಟು ಸಹಾಯಹಸ್ತ ಚಾಚೋಣ.
ಸಂತ್ರಸ್ತರಿಗೆ ಸಹಾಯಹಸ್ತ ಚಾಚುವ ಉದ್ದೇಶ ನಿಮಗಿದ್ದಲ್ಲಿ, ಚೆಕ್ ಅಥವಾ ಡಿಡಿಯನ್ನು 'The Prime Minister's National Relief Fund' (PMNRF)ಹೆಸರಿಗೆ ಪಡೆದು ' The Prime Minister's Office, South Block, New Delhi 11000' ವಿಳಾಸಕ್ಕೆ ಕಳುಹಿಸಬಹುದು. ಪರಿಹಾರ ಹಣವನ್ನು ಮನಿ ಆರ್ಡರ್ ರೂಪದಲ್ಲೂ ಕಳುಹಿಸಬಹುದು ಇದಕ್ಕಾಗಿ ಬ್ಯಾಂಕುಗಳು ಯಾವುದೇ ಹೆಚ್ಚುವರಿ ಶುಲ್ಕವನ್ನ್ನು ವಿಧಿಸುವುದಿಲ್ಲ. ಈ ಕೆಳಕಂಡ ಬ್ಯಾಂಕ್‌ಗಳ ಮೂಲಕ ಚೆಕ್ ಅಥವಾ ಡಿಡಿಯನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಬಹುದು.
1) State Bank of India, 2) Central Bank of India, 3) Union bank of India, 4) Dena Bank, 5) Syndicate Bank, 6) Corporation Bank, 7) Bank of India, 8) Indian Overseas Bank, 9) Punjab National Bank, 10) Indian Bank, 11) Allahabad Bank, 12) Citi Bank, 13) Canara Bank, 14) UCO Bank, 15) Bank of Baroda, 16) Vijaya Bank, 17) HDFC Bank, 18) Standard Chartered, 19) HSBC Bank, 20) Axis Bank and 21) ICICI Bank.
ಬಿಹಾರ ಪ್ರವಾಹದಿಂದ ಉಂಟಾಗಿರುವ ಕಣ್ಣೀರ ಕಥೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕನ್ನಡ ದಿನ ಪತ್ರಿಕೆ ಪ್ರಜಾವಾಣಿ ಕೈಜೋಡಿಸಿದ್ದು ಪರಿಹಾರ ನಿಧಿ ಕೇಂದ್ರವನ್ನು ಸ್ಥಾಪಿಸಿದೆ. ಡೆಕ್ಕನ್ ಹೆರಾಲ್ಡ್ ಪ್ರಜಾವಾಣಿ ರಿಲೀಫ್ ಟ್ರಸ್ಟ್ ಹೆಸರಿಗೆ ಬರೆದ ಚೆಕ್ / ಡಿ.ಡಿ ಅನ್ನು ನಂ.75, ಎಂ.ಜಿ.ರಸ್ತೆ, ಬೆಂಗಳೂರು, 560001 ಇಲ್ಲಿಗೆ ಕಳಿಸಬಹುದು. ಈ ದೇಣಿಗೆಯು ಆದಾಯ ತೆರಿಗೆ ಕಾಯ್ದೆ 80 ಜಿ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ. ಲಕೋಟೆಯ ಮೇಲೆ 'ಪ್ರಜಾವಾಣಿ ಪರಿಹಾರ ನಿಧಿ' ಎಂದು ನಮೂದಿಸಲು ಮರೆಯಬೇಡಿ. ರೂ. 1,000 ಮತ್ತು ಅದಕ್ಕಿಂತ ಹೆಚ್ಚು ದೇಣಿಗೆ ನೀಡಿದವರ ಹೆಸರನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ.
(ದಟ್ಸ್ ಕನ್ನಡ ವಾರ್ತೆ)
ಬಿಹಾರ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ ಸರ್ಕಾರ
ಬಿಹಾರ್ ಪ್ರವಾಹ : ಪಿಎಂ, ಸೋನಿಯಾ ವೈಮಾನಿಕ ಸಮೀಕ್ಷೆ












Click it and Unblock the Notifications