ಸಚಿವ ಸಂಪುಟ ಸಭೆಗೆ ಯಡಿಯೂರಪ್ಪ ಕರೆ
ಬೆಂಗಳೂರು, ಸೆ. 4 : ಕಳೆದ ಒಂದು ವಾರದ ಅವಧಿಯಲ್ಲಿ ರಾಜ್ಯದಲ್ಲಿ ಆಗಿರುವ ಸ್ಥಿತಿಗತಿಗಳ ಕುರಿತಂತೆ ಚರ್ಚಿಸಲು ಗುರುವಾರ ಸಂಜೆ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ. ಅಮೆರಿಕದ ಶಿಕಾಗೋದಲ್ಲಿ ಏರ್ಪಡಿಸಲಾಗಿದ್ದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ ನಗರಕ್ಕೆ ಆಗಮಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ಯಶಸ್ವಿ ನೂರು ದಿನಗಳನ್ನು ಪೂರೈಸಿರುವ ಸಂಭ್ರಮ ಹಂಚಿಕೊಳ್ಳುವುದು ಸೇರಿದಂತೆ ಕಳೆದ ಮೂರ್ನಾಲ್ಕು ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸುರಿದ ಮಳೆಯಿಂದ ಉಂಟಾಗಿರುವ ಬೆಳೆ ಹಾಗೂ ಆಸ್ತಿ ಪಾಸ್ತಿ ಹಾನಿಯ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು.
ಸಭೆಯ ನಂತರ ವರುಣನ ರುದ್ರನರ್ತನದಿಂದ ಜಲಾವೃತವಾಗಿರುವ ಬೆಂಗಳೂರಿನ ಕೆಲ ಬಡಾವಣೆಗಳಿಗೆ ಯಡಿಯೂರಪ್ಪ ಭೇಟಿ ನೀಡಲಿದ್ದಾರೆ. ಕಳೆದ ವಾರದಿಂದ ರಾಜ್ಯದಲ್ಲಿ ಆಗಿರುವ ಸ್ಥಿತಿಗತಿಗಳ ಬಗ್ಗೆ ಗೃಹ ಸಚಿವ ವಿ.ಎಸ್.ಆಚಾರ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿವರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications