ಸೋನಿಯಾ ಗಾಂಧಿ ವಿಮಾನ ತುರ್ತು ಭೂಸ್ಪರ್ಶ
ಬೆಂಗಳೂರು, ಸೆ. 4 : ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕೇಂದ್ರದ ಹಣಕಾಸು ಸಚಿವ ಪಿ. ಚಿದಂಬರಂ ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಗುರುವಾರ ತುರ್ತು ಭೂಸ್ಪರ್ಶ ಮಾಡಿತು. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ನವದೆಹಲಿಯಿಂದ ತಮಿಳುನಾಡಿನ ಕೊಯಮತ್ತೂರು ಬಳಿ ಇರುವ ತಿರುಚ್ಚಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೋನಿಯಾ ಗಾಂಧಿ ಹಾಗೂ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಸೇರಿದಂತೆ ಅನೇಕರು ಪ್ರಯಾಣಿಸುತ್ತಿದ್ದರು. ಚಾರ್ಟರ್ಡ್ ಕಂಪನಿಯ ವಿಮಾನದ ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ತಕ್ಷಣ ವಿಮಾನದ ಪೈಲಟ್ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಷ ಮಾಡಿದರು.
ವಿಮಾನದ ಒಂದು ಎಂಜಿನ್ ನಲ್ಲಿ ದೋಷ ಕಂಡು ಬಂದಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಇಂದು ಮಧ್ಯಾಹ್ನ ನಡೆದ ಘಟನೆಯಿಂದ ನಿಲ್ದಾಣದಲ್ಲಿ ಕೆಲ ಕಾಲ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಪೈಲಟ್ ನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಎಂಜನ್‌ನ ದೋಷಕ್ಕೆ ಕಾರಣವೇನು ಎನ್ನುವುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ತಿರುಚ್ಚಿಯಲ್ಲಿನ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಅದೇ ಕಂಪನಿಯ ಇನ್ನೊಂದು ವಿಮಾನದಲ್ಲಿ ಸೋನಿಯಾ, ಚಿದಂಬರಂ ಪ್ರಯಾಣ ಬೆಳಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications