ಗಣೇಶ ಮಂಟಪಕ್ಕೆ ಬೆಂಕಿ; ರಾಯಚೂರು ಬಂದ್ಗೆ ಕರೆ
ರಾಯಚೂರು, ಸೆ. 4 : ಗುರುವಾರ ಬೆಳಗಿನ ಜಾವ ರಾಯಚೂರಿನ ನಾಲ್ಕು ಬೇರೆ ಬೇರೆ ಪ್ರದೇಶಗಳಲ್ಲಿ ಗಣೇಶ ಮಂಟಪಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಯಚೂರು ಬಂದ್ಗೆ ಕರೆ ನೀಡಲಾಗಿದೆ. ಯುವಕರ ಗುಂಪೊಂದು ಆರೋಪಿಗಳನ್ನು ಬಂಧಿಸಬೇಕೆಂದು ತೀವ್ರ ಪ್ರತಿಭಟನೆ ನಡೆಸುತ್ತಿದ್ದು ಪರಿಸ್ಥಿತಿ ಬಿಗಡಾಯಿಸಿದೆ. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು.
ಇಂದು ಬೆಳಗಿನ ಜಾವ ನಗರದ ಸೂಪರ್ ಮಾರ್ಕೆಟ್, ಜೈನ್ ಮಂದಿರ, ಸ್ಟೇಷನ್ ರಸ್ತೆ ಹಾಗೂ ಹರಿಹರ ರಸ್ತೆಯಲ್ಲಿರುವ ಗಣೇಶ ಮಂಟಪಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ವಿಷಯ ರಾಯಚೂರು ನಗರಾದ್ಯಂತ ಹಬ್ಬುತ್ತಿದ್ದಂತೆ ಯುವಕರ ಗುಂಪು ಘಟನೆಯನ್ನು ಖಂಡಿಸಿ ಪ್ರತಿಭಟನೆಗಿಳಿದಿವೆ. ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಗಣೇಶ ಮಂಟಪಗಳಿಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದು ಪತ್ತೆ ಕಾರ್ಯ ಮುಂದುವರೆದಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿಯಾಗಿ ನಾಲ್ಕು ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದ್ದು ರಾಯಚೂರಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.ಪ್ರತಿಭಟನಕಾರರನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಆದರೂ ಯುವಕರ ಗುಂಪು ಘಟನೆಯನ್ನು ಖಂಡಿಸಿ ಅಲ್ಲಲ್ಲಿ ಪ್ರತಿಭಟನೆಗೆ ಇಳಿದಿವೆ. ಪ್ರತಿಭಟನೆಯಲ್ಲಿ ಮೂರು ಬಸ್ಸು ಹಾಗೂ ಎರಡು ಲಾರಿಗಳಿಗೆ ಕಲ್ಲು ತೂರಿ ಜಖಂಗೊಳಿಸಲಾಗಿದೆ. ರಾಯಚೂರಿನಲ್ಲಿ ವಾಹನ ಸಂಚಾರ ಸಂಪೂರ್ಣ ಸ್ತಗಿತಗೊಂಡಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications