ಸೆ.4ರಂದು ಪರಮಾಣು ಪೂರೈಕೆ ರಾಷ್ಟ್ರಗಳ ಮಹತ್ವದ ಸಭೆ
ವಿಯನ್ನಾ, ಸೆ. 4 : ಭಾರತ ಅಮೆರಿಕ ಪರಮಾಣು ಒಪ್ಪಂದ ಕುರಿತು ಗುರುವಾರ ಪರಮಾಣು ಪೂರೈಕೆ ರಾಷ್ಟ್ರಗಳ(ಎನ್ಎಸ್ ಜಿ) ಇನ್ನೊಂದು ಸುತ್ತಿನ ಮಹತ್ವದ ಮಾತುಕತೆ ನಡೆಯಲಿದೆ. ಕಳೆದ ಆ. 21 ಮತ್ತು 22 ರಂದು ನಡೆದ ಎನ್ಎಸ್ ಜಿ ಸಭೆಯಲ್ಲಿ ಇಟ್ಟಿದ್ದ ಕೆಲ ಷರತ್ತುಗಳಿಗೆ ಸಹಿ ಹಾಕಲು ಭಾರತ ನಿರಾಕರಿಸಿದ ಹಿನ್ನೆಲೆಯಲ್ಲಿ ಒಪ್ಪಂದಕ್ಕೆ ಎನ್ ಎಸ್ ಜಿ ರಾಷ್ಟ್ರಗಳು ಹಸಿರು ನಿಶಾನೆ ತೋರಲು ಸ್ಪಷ್ಟವಾಗಿ ನಿರಾಕರಿಸಿದ್ದವು.
45 ಎನ್ಎಸ್ ಜಿ ರಾಷ್ಟ್ರಗಳಲ್ಲಿ ನ್ಯೂಜಿಲ್ಯಾಂಡ್, ಆಸ್ಚ್ರೀಯಾ ದೇಶಗಳು ಭಾರತಕ್ಕೆ ಎನ್ ಪಿಟಿ ಮತ್ತು ಸಿಟಿಬಿಟಿಗೆ ಸಹಿ ಹಾಕುವವರೆಗೂ ಯಾವುದೇ ಕಾರಣಕ್ಕೂ ಒಪ್ಪಂದವನ್ನು ಅಂತಿಮಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದವು. ಎಸ್ಎಸ್ ಜಿ ಕಾನೂನು ಎಲ್ಲರಿಗೂ ಸಮಾನ. ಇದರಲ್ಲಿ ತಾರತಮ್ಯ ಮಾಡುವ ಮಾತೇ ಇಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಕಳೆದ ಆ. 21ಹಾಗೂ 22 ರಂದು ಎರಡು ದಿನಗಳ ಕಾಲ ನಡೆದ ಎನ್ಎಸ್ ಜಿ ಸಭೆಯಲ್ಲಿ ಒಪ್ಪಂದ ಕುರಿತು ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.
ಆದರೆ ಇದೀಗ ಭಾರತ ಅಮೆರಿಕ ಅಣು ಒಪ್ಪಂದದ ಸಮಗ್ರ ವರದಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಎನ್ ಎಸ್ ಜಿ ಕಾನೂನಿಗೆ ಒಳಪಡುವ ಎಲ್ಲ ಅಂಶಗಳನ್ನು ಇದರಲ್ಲಿ ಸೇರಿಸಲಾಗಿದೆ. ಎನ್ಎಸ್ ಜಿ ನೇತೃತ್ವದ ಜರ್ಮನಿ ರಾಷ್ಟ್ರವು ಭಾರತ ತಯಾರಿಸಿದ ನೂತನ ವರದಿಗೆ ಸಹಮತ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಒಪ್ಪಂದಕ್ಕೆ ಅಂತಿಮ ಸಹಿ ಬೀಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ನಡುವೆ ಒಪ್ಪಂದದಲ್ಲಿ ಚೀನಾ ದೇಶವು ತಲೆಹಾಕಿದ್ದು ಭಾರತ-ಅಮೆರಿಕ ಅಣು ಒಪ್ಪಂದ ಎನ್ಎಸ್ ಜಿ ಸಂವಿಧಾನಕ್ಕೆ ಬದ್ಧವಾಗಿರಬೇಕು ಎಂದು ಅಭಿಪ್ರಾಯಪಟ್ಟಿದೆ.
(ಏಜೆನ್ಸೀಸ್)












Click it and Unblock the Notifications