ಹೊಗೇನಕಲ್ ಯೋಜನೆಗೆ ಅಡ್ಡಿ ಬೇಡ : ರಾಮದಾಸ್

ಬೆಂಗಳೂರು, ಸೆ. 4 : ತಮಿಳುನಾಡಿನ ಎರಡು ಜಿಲ್ಲೆಗಳ ಕುಡಿಯುವ ನೀರಿನಲ್ಲಿ ಫ್ಲೊರೈಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿದೆ. ಇದೊಂದು ಜನಹಿತ ಕೆಲಸವಾಗಿರುವುದರಿಂದ ಯೋಜನೆಯನ್ನು ರಾಜಕೀಕರಣಗೊಳಿಸುವುದು ಬೇಡ ಎಂದು ಕೇಂದ್ರದ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಕರ್ನಾಟಕದ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ತಮಿಳುನಾಡು ಸರ್ಕಾರ ಕೈಗೊಂಡಿರುವ ಕುಡಿಯುವ ನೀರಿನ ಯೋಜನೆಗೆ ಸಂಪೂರ್ಣ ಸಹಕಾರ ನೀಡಿ ಎಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದರು. ಕಳೆದ 50 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹೊಗೇನಕಲ್ ವಿವಾದವನ್ನು ಇತ್ಯರ್ಥಗೊಳಿಸಬೇಕಿದೆ. ಹೊಗೇನಕಲ್ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸುವುದರಿಂದ ತಮಿಳುನಾಡಿನ ಎರಡು ಜಿಲ್ಲೆಗಳ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸಿದಂತಾಗುತ್ತದೆ. ಕೃಷ್ಣಗಿರಿ ಹಾಗೂ ಧರ್ಮಪುರಿ ಜಿಲ್ಲೆಗಳ ಜನರು ಫ್ಲೊರೈಡ್ ಭರಿತ ನೀರು ಕುಡಿಯುತ್ತಿರುವುದರಿಂದ ಜನರ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಹಾಗೂ ಜನರು ಯೋಜನೆಗೆ ಅಡ್ಡಿಪಡಿಸುವುದು ತರವಲ್ಲ ಎಂದು ರಾಮದಾಸ್ ಅಭಿಪ್ರಾಯಪಟ್ಟರು.

ಕೇಂದ್ರ ಸಚಿವ ಅನ್ಬುಮಣಿ ರಾಮದಾಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ವೈದ್ಯಕೀಯ ಸಚಿವ ರಾಮಚಂದ್ರಗೌಡ, ಹೊಗೇನಕಲ್ ಯೋಜನೆಯನ್ನು ಕೈಗೆತ್ತಿಕೊಳ್ಳುವುಕ್ಕಿಂತ ಮುಂಚೆ ತಮಿಳುನಾಡು ಸರ್ಕಾರ ಕರ್ನಾಟಕದ ಗಮನಕ್ಕೆ ತಂದಿಲ್ಲ ಎಂದು ಸ್ಪಷ್ಟಪಡಿಸಿದರು. ತಮಿಳುನಾಡಿನ ಜೊತೆಗೆ ವಿರಸ ಹೊಂದಲು ಕರ್ನಾಟಕಕ್ಕೂ ಆಸಕ್ತಿ ಇಲ್ಲ. ಪಕ್ಕದ ರಾಜ್ಯದೊಂದಿಗೆ ಸ್ನೇಹ ಭಾವ ಹೊಂದಲು ನಾವು ಕೂಡಾ ಸಜ್ಜಾಗಿದ್ದೇವೆ. ಆದ್ದರಿಂದ ಯೋಜನೆ ಕುರಿತು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಉಭಯ ರಾಜ್ಯ ಮುಖ್ಯಮಂತ್ರಿಗಳ ಸಭೆ ಮೂಲಕ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ರಾಮಚಂದ್ರಗೌಡ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+