ಎರಡು ವೈದ್ಯಕೀಯ ಕಾಲೇಜುಗಳ ಮಾನ್ಯತೆ ರದ್ದಿಗೆ ನಿರ್ಧಾರ
ಮಣಿಪಾಲ್, ಸೆ. 2 : ಭಾರತೀಯ ವೈದ್ಯಕೀಯ ಮಂಡಳಿಯ ಕಾನೂನಿನ ಪ್ರಕಾರ ಮೂಲಭೂತ ಸೌಲಭ್ಯ ಹಾಗೂ ಅಗತ್ಯ ವಿದ್ಯಾರ್ಥಿಗಳ ಸಂಖ್ಯೆಯೊಂದಿಗೆ ಕಾಲೇಜು ನಡೆಸುವಲ್ಲಿ ವಿಫಲವಾಗಿರುವ ಮಣಿಪಾಲ್ ವಿಶ್ವ ವಿದ್ಯಾಲಯದ ದಂತ ಮತ್ತು ಆಯುರ್ವೇದಿಕ್ ಕಾಲೇಜುಗಳ ಮಾನ್ಯತೆಯನ್ನು ರದ್ದು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ತಿಳಿಸಿದರು.
ನಗರದ ಮಣಿಪಾಲ್ ವೈದ್ಯಕೀಯ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೊಂದು ದುರದೃಷ್ಟಕರ ಬೆಳವಣಿಗೆ ಎಂದರು. ವೈದ್ಯಕೀಯ ಮಂಡಳಿ ಸ್ಪಷ್ಟವಾದ ಕಾನೂನುನನ್ನು ಮಾಡಿದೆ, ಅದರ ಅಡಿಯಲ್ಲಿ ಕಾಲೇಜುಗಳು ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದರೆ ಕಾಲೇಜು ನಡೆಸಲು ಅನುಮತಿ ಪಡೆದುಕೊಂಡು ಉತ್ತಮ ರೀತಿಯಲ್ಲಿ ಕಾಲೇಜು ನಡೆಸದಿರುವುದು ಈ ಕ್ರಮಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದರು.
ಮಣಿಪಾಲ್ ವಿಶ್ವವಿದ್ಯಾಲಯ ತನ್ನ ಪ್ರತಿ ಕಾಲೇಜಿನಲ್ಲಿ ವಾರ್ಷಿಕ 250 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಬೇಕು, ಆದರೆ ವಿಶ್ವವಿದ್ಯಾಲಯ ಈ ನಿಯಮವನ್ನು ಮೀರಿ ಹೆಚ್ಚುವರಿ 250 ವಿದ್ಯಾರ್ಥಿಗಳಿವೆ ಪ್ರವೇಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಕಾಲೇಜುಗಳ ಮಾನ್ಯತೆಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ನರೇಶ್ ದಯಾಳ್ ಸ್ಪಷ್ಟಪಡಿಸಿದ್ದಾರೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications