ಪಡಿತರ ಚೀಟಿಯ ದುರುಪಯೋಗಕ್ಕೆ ಕಠಿಣ ಕ್ರಮ
ಬೆಂಗಳೂರು, ಸೆ. 2 : ಪಡಿತರ ಚೀಟಿಯ ಪ್ರಯೋಜನವನ್ನು ಅನ್ಯ ಕೆಲಸಗಳಿಗೆ ಉಪಯೋಗಿಸಿಕೊಂಡರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ಮತ್ತು ಆಹಾರ ಪೂರೈಕೆ ಖಾತೆ ಸಚಿವ ಎಚ್. ಹಾಲಪ್ಪ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಸರ್ಕಾರ ನೀಡುತ್ತಿರುವ ಪಡಿತರ ಚೀಟಿಯನ್ನು ಸರ್ಕಾರದ ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುವ ಪಡಿತರ ಆಹಾರ ವಸ್ತುಗಳನ್ನು ಪಡೆಯಲು ಮಾತ್ರ ಉಪಯೋಗಿಸಿಬೇಕು ಎಂದರು.ಪಡಿತರ ಚೀಟಿಯಿಂದ ನಗರದ ಜನರು ಅನೇಕ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಅನೇಕ ದೂರುಗಳು ಬಂದಿವೆ. ಮುಖ್ಯವಾಗಿ ಬ್ಯಾಂಕ್ ಗಳಲ್ಲಿ ಸಾಲ ಪಡೆಯಲು ಇದನ್ನು ಉಪಯೋಗಿಸುತ್ತಿದ್ದಾರೆ. ಅಂತಹ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಲ್ಲಿ ಅಂಥವರ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.
ಅಷ್ಟೇ ಅಲ್ಲದೆ ಸರ್ಕಾರಿ ನೌಕರರು ಸಹ ಪಡಿತರ ಚೀಟಿಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಸರ್ಕಾರಿ ನೌಕರರು ಇದರ ಸೌಲಭ್ಯ ಪಡೆದಿರುವುದು ಸಾಬೀತಾದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಹೇಳಿದರು. ಪಡಿತರ ಚೀಟಿ ಪಡೆದಿರುವ ಸುಮಾರು ಒಂದುಲಕ್ಷ ಜನ ಬಿಪಿಎಲ್ ಪಟ್ಟಿಯಲ್ಲಿ ಇಲ್ಲದವರಾಗಿದ್ದಾರೆ. ಅಂಥವರನ್ನುಗುರುತಿಸಿ ಕೂಡಲೇ ಪಡಿತರ ಚೀಟಿಯನ್ನು ವಾಪಸ್ಸು ಪಡೆಯಲಾಗುವುದು ಎಂದರು.
ರಾಜ್ಯದ ಅನೇಕ ಕಡೆಗಳಲ್ಲಿ ಪಡಿತರ ಚೀಟಿಯ ಅಭಾವವಿದೆ. ಶೀಘ್ರದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಜನರಿಗೂ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗುವುದು ಎಂದು ಸಚಿವರು ಹೇಳಿದರು. ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಹಾಗೂ ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ. ಮುನಿಯಪ್ಪ, ಜಿಲ್ಲಾಧಿಕಾರಿ ಆರ್.ಕೆ.ರಾಜು, ಆಹಾರ ಇಲಾಖೆ ಆಯುಕ್ತ ಕೆ. ಶಿವರಾಂ ಉಪಸ್ಥಿತರಿದ್ದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications