ಯಡಿಯೂರು ಮಠ ಹಸ್ತಾಂತರ ಖಂಡಿಸಿ ಬಂದ್
ಹುಬ್ಬಳ್ಳಿ, ಸೆ. 1 : ಗದಗಿನ ತೋಂಟದಾರ್ಯ ಮಠಕ್ಕೆ ಯಡಿಯೂರು ಸುಕ್ಷೇತ್ರವನ್ನು ಹಸ್ತಾಂತರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಯಡಿಯೂರು ಮಠದ ಅರ್ಚಕರು ಮತ್ತು ಸ್ಥಳೀಯರು ಯಡಿಯೂರು ಬಂದ್ ಕರೆ ನೀಡಿದ್ದಾರೆ. ಸ್ಥಳೀಯ ಶಾಸಕ ಕೃಷ್ಣಕುಮಾರ್ ಬಂದ್ ಹಿನ್ನಲೆಯಲ್ಲಿ ಹಸ್ತಾಂತರ ವಿರೋಧಿಸಿ ನಡೆಸುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಮೂರು ಮಠಗಳ ನಡುವೆ ಸಂಘರ್ಷ
ಡಂಬಳ-ಗದಗಿನ ತೋಂಟದಾರ್ಯ ಸಿದ್ಧಲಿಂಗೇಶ್ವರ ಸ್ವಾಮಿಗಳ ಯಡಿಯೂರು ಕ್ಷೇತ್ರದ ವಾರಸುದಾರಿಕೆಯ ವಿವಾದ ಇದೀಗ ಹೈಕೋರ್ಟ್ ಮೆಟ್ಟಿಲೇರುವ ಸನ್ನಾಹದಲ್ಲಿದೆ. ಗೋಕರ್ಣ ಕ್ಷೇತ್ರವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ ಬೆನ್ನೆಲ್ಲೇ ಯಡಿಯೂರು ಕ್ಷೇತ್ರದ ವಾರಸುದಾರಿಕೆಯ ವಿವಾದವು ಮೂರು ಮಠಗಳ ಮಧ್ಯೆ ಸಂಘರ್ಷ ಹುಟ್ಟು ಹಾಕಿದೆ.
ಕುಣಿಗಲ್ ತಾಲ್ಲೂಕಿನ ಯಡೆಯೂರಿನ ಸುಕ್ಷೇತ್ರ ಸಿದ್ಧಲಿಂಗೇಶ್ವರ ಮಠವು ಸದ್ಯ ಮುಜರಾಯಿ ಇಲಾಖೆಯ ಆಧೀನದಲ್ಲಿದೆ. ಯಡೆಯೂರು ಮಠವನ್ನು ತಮಗೆ ಹಸ್ತಾಂತರಿಸಬೇಕು ಎಂದು ಡಂಬಳ-ಗದಗಿನ ತೋಂಟದಾರ್ಯ ಸಂಸ್ಥಾನ ಮಠದ ಡಾ. ಸಿದ್ಧಲಿಂಗೇಶ್ವರ ಸ್ವಾಮಿಗಳು ಸರ್ಕಾರದ ಮುಂದೆ ಹಕ್ಕು ಪ್ರತಿಪಾದಿಸಿದ ಬೆನ್ನಲ್ಲೇ ಪಂಚಾಚಾರ್ಯ ಪೀಠದ ರೇಣುಕಾಚಾರ್ಯರು ಹಾಗೂ ಆದಿ ಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮಿಗಳು ಈ ಕ್ಷೇತ್ರವನ್ನು ತಮಗೆ ನೀಡುವಂತೆ ಬೊಸ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಮಾಲೀಕತ್ವಕ್ಕೆ ಉಂಟಾಗಿರುವ ಭಿನ್ನಾಭಿಪ್ರಾಯಗಳಿಗೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದ್ದು, ಗದಗಿನ ಸ್ವಾಮಿಗಳು ನ್ಯಾಯಾಲಯದ ಮೆಟ್ಟಿಲು ಏರಿಲು ನಿರ್ಧರಿಸಿದ್ದಾರೆ. ಯಡಿಯೂರು ಕ್ಷೇತ್ರದ ವಾರಸುದಾರಿಕೆಯ ಕುರಿತು ಎಲ್ಲ ದಾಖಲೆಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಸದ್ಯದಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ಶ್ರೀಗಳು ಸ್ವಾಮಿಗಳು ಸ್ಪಷ್ಟಪಡಿಸಿದ್ದಾರೆ. ಯಡಿಯೂರು ಕ್ಷೇತ್ರದ ಆಸ್ತಿಗಾಗಿ ನಾವು ಈ ವಾರಸುದಾರಿಕೆ ಹಕ್ಕನ್ನು ಪ್ರತಿಪಾದಿಸುತ್ತಿಲ್ಲ, ಕುಣಿಗಲ್ ಶಾಸಕರು ಆರೋಪಿಸುವಂತೆ ಅಲ್ಲಿನ ಗೆಸ್ಟ್ ಹೌಸ್, ಪೆಟ್ರೋಲ್ ಬಂಕ್, ಬೆಳ್ಳಿ, ಚಿನ್ನಾಭರಣ, ವಾಣಿಜ್ಯ ಮಳಿಗೆ, ಜಮೀನು ಇತ್ಯಾದಿ ಸ್ಥಿರಾಸ್ತಿಗಳನ್ನು ಸರ್ಕಾರವೇ ಇಟ್ಟುಕೊಳ್ಳಲಿ. ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಲಿಖಿತ ಬೇಡಿಕೆಯಲ್ಲಿ ಈ ಬಗ್ಗೆ ತಿಳಿಸಲಾಗಿದೆ ಎಂದು ಸಿದ್ಧಲಿಂಗೇಶ್ವರ ಸ್ವಾಮಿಗಳು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಗೋಕರ್ಣ ಮುಗಿಯಿತು ಈಗ ಸಿದ್ಧಲಿಂಗೇಶ್ವರನ ಸರದಿ












Click it and Unblock the Notifications