ಟ್ರಾಫಿಕ್ ಸಮಸ್ಯೆ : ಚೆನ್ನೈನಿಂದ ಐಟಿ ಕಂಪೆನಿಗಳ ಗುಳೆ?
ಚೆನ್ನೈ, ಸೆ.1 : ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಟ್ರಾಫಿಕ್ ಸಮಸ್ಯೆ ಪೆಡಂಭೂತವಾಗಿ ತಮಿಳುನಾಡು ಸರ್ಕಾರವನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಡಿಎಂಕೆ ಸರ್ಕಾರ ಟ್ರಾಫಿಕ್ ಸಮಸ್ಯೆ ಕುರಿತು ಶೀಘ್ರ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಚೆನ್ನೈ ನಗರದಿಂದ ಹೊರಹೋಗಬೇಕಾಗುತ್ತದೆ ಎಂದು ಬೆಂಗಳೂರು ಮೂಲದ ವಿಪ್ರೊ ಸೇರಿದಂತೆ ಪ್ರತಿಷ್ಠಿತ ಸಾಫ್ಟವೇರ್ ಕಂಪನಿಗಳು ಎಚ್ಚರಿಕೆ ನೀಡಿದೆ.
ಸಂಚಾರ ಸಮಸ್ಯೆಯಿಂದಾಗಿ ಕಂಪೆನಿಯ ನೌಕರರು ಸಕಾಲದಲ್ಲಿ ಕೆಲಸ ಹಾಜರಾಗಲು ಸಾಧ್ಯವಾಗುತ್ತಿಲ್ಲ.ಟ್ರಾಫಿಕ್ ಎಂಬ ಚಕ್ರವ್ಯೂಹದಲ್ಲಿ ಸಿಕ್ಕಿ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ತಮಿಳುನಾಡು ಸರ್ಕಾರ ಕಂಪೆನಿಗಳಿಗೆ ಬೇಕಿರುವ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ತೋರುತ್ತಿರುವ ನಿರ್ಲಕ್ಷ್ಯ ನಮಗೆ ತೀವ್ರ ಬೇಸರ ತರಿಸಿದೆ. ಸಂಚಾರ ಸಮಸ್ಯೆ ಹಾಗೂ ಮೂಲಭೂತ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ.ಆದರೆ ಸರ್ಕಾರ ಮಾತ್ರ ದಿವ್ಯ ಮೌನಕ್ಕೆ ಶರಣಾಗಿದೆ ಎಂದು ಕಂಪನಿಗಳು ದೂರಿವೆ.
ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಲಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಚೆನ್ನೈಯಿಂದ ಹೊರಹೋಗುವ ಮನಸ್ಸು ಮಾಡಬೇಕಾಗುತ್ತದೆ ಎಂದು ವಿಪ್ರೋ ಸೇರಿದಂತೆ ಎಲ್ಲ ಸಾಪ್ಟವೇರ್ ಕಂಪನಿಯ ಮುಖ್ಯಸ್ಥರು ಸರ್ಕಾರಕ್ಕೆ ಮನದಟ್ಟು ಮಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications