ಇಗ್ಗಲೂರು ಹೈಟೆಕ್ ಕಸಾಯಿಖಾನೆ ಸ್ಥಳಾಂತರ
ಬೆಂಗಳೂರು, ಸೆ.1: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಗ್ಗಲೂರು ಬಳಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್ ಕಸಾಯಿಖಾನೆಯನ್ನು ಸರ್ಕಾರ ಸ್ಥಳಾಂತರಿಸಲು ನಿರ್ಧರಿಸಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಆರ್.ಆಶೋಕ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ವಿವಾದಿತ ಕಸಾಯಿಖಾನೆಯನ್ನು ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಾಲಾಯಿತು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹೈಕೋರ್ಟ್ ಆದೇಶಕ್ಕೆ ಮನ್ನಣೆ ನೀಡಿ ಇಗ್ಗಲೂರು ಸಮೀಪದಲ್ಲಿಯೇ ಸರ್ಕಾರದ ಜಮೀನಿನಲ್ಲಿ ಕಸಾಯಿಖಾನೆ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂಬಂಧ ವಿವರವಾದ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇಗ್ಗಲೂರಿಗೆ 5-10 ಕಿ.ಮೀ ವ್ಯಾಪ್ತಿಯಲ್ಲಿ ಕಸಾಯಿಖಾನೆ ಸ್ಥಾಪಿಸಲಾಗುತ್ತದೆ. ಇಗ್ಗಲೂರು ಹೈಟೆಕ್ ಕಸಾಯಿಖಾನೆಗೆ ಸ್ಥಳೀಯ ಶಾಸಕರು ಹಾಗೂ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೈಕೋರ್ಟ್ ಆದೇಶದ ಪ್ರಕಾರ, ಜನ ವಸತಿ ಹಾಗೂ ದೇವಸ್ಥಾನಗಳು ಇಲ್ಲದ ಪ್ರದೇಶಗಳಲ್ಲಿ ಕಸಾಯಿಖಾನೆ ನಿರ್ಮಿಸಲಾಗುತ್ತದೆ ಎಂದು ಅಶೋಕ್ ವಿವರಿಸಿದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications