ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸಿದ್ದು ಆಯ್ಕೆ ಸಂಭವ
ಬೆಂಗಳೂರು, ಆ. 31 : ಪ್ರದೇಶ ಕರ್ನಾಟಕ ಸಮಿತಿಯ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಮಾಜಿ ಉಪಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನೇಮಕವಾಗುವುದು ಬಹುತೇಕ ಖಚಿತವಾಗಿದೆ.
ಸೆಪ್ಟಂಬರ್ 1 ರಂದು ನವದೆಹಲಿಗೆ ಬರುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದು, ಅದೇ ದಿನ ಕೆಪಿಸಿಸಿ ನೂತನ ಅಧ್ಯಕ್ಷರ ನೇಮಕಾತಿ ಪ್ರಕಟವಾಗುವ ಸಾಧ್ಯತೆ ಇದೆ. ರಾಜ್ಯದ ರಾಜಕೀಯದ ಪರಿಸ್ಥಿತಿ ಹಾಗೂ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕತ್ವವನ್ನು ಯಾರ ಹೆಗಲಿಗೆ ಕಟ್ಟಬೇಕೆಂದು ವಿಚಾರದಲ್ಲಿ ತೀವ್ರ ಗೊಂದಲದಲ್ಲಿ ಮುಳುಗಿದ್ದ ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಸಿದ್ದರಾಮಯ್ಯ ಅವರ ಹೆಗಲಿಗೆ ಕಟ್ಟಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಲು ಹೈಕಮಂಡ್ ನಿರ್ಧರಿಸಿದ್ದು, ಆರ್.ವಿ.ದೇಶಪಾಂಡೆ ಅವರು ಹಿರಿಯ ಉಪಾಧ್ಯಕ್ಷರಾಗಿ ಅಥವಾ ಕಾರ್ಯಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆಗಳಿವೆ. ಇಲ್ಲವೇ ಇಬ್ಬರನ್ನೂ ಕೆಪಿಸಿಸಿ ಉಪಾಧ್ಯಕ್ಷರಾಗಿ ನೇಮಕ ಮಾಡಲು ಹೈಕಮಾಂಡ್ ಉದ್ದೇಶಿಸಿದೆ. ಈ ಸಂಬಂಧ ಸೋಮವಾರ ಅಧಿಕೃತ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications