ಕೈಗಾರಿಕಾ ದಿಗ್ಗಜ ಕೆಕೆ ಬಿರ್ಲಾ ಇನ್ನಿಲ್ಲ
ನವದೆಹಲಿ, ಆ.30: ಕೈಗಾರಿಕಾ ರಂಗದ ದಿಗ್ಗಜ ಕೃಷ್ಣ ಕುಮಾರ್ ಬಿರ್ಲಾ ಶನಿವಾರ ಬೆಳಗ್ಗೆ ತಮ್ಮ ಕೋಲ್ಕತ್ತಾದ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಬಿರ್ಲಾ ಕೈಗಾರಿಕಾ ಕುಟುಂಬದ ಹಿರಿಯ ತಲೆ ಎನಿಸಿಕೊಂಡಿದ್ದ ಕೆಕೆಬಿರ್ಲಾ ಅವರು ಘನಶ್ಯಾಮ್ ದಾಸ್ ಬಿರ್ಲಾ ಅವರ ಪುತ್ರ. ರಾಜ್ಯ ಸಭಾ ಸದಸ್ಯರಾಗಿ ಕೆಕೆಬಿರ್ಲಾ ಕಾರ್ಯ ನಿರ್ವಹಿಸಿದ್ದಾರೆ. ಹಿಂದೂಸ್ತಾನ್ ಟೈಮ್ ನ ಚೇರ್ ಮನ್ ಹಾಗೂ ಬಿರ್ಲಾ ಸಮೂಹ ಸಂಸ್ಥೆಯ ಅನೇಕ ಕೈಗಾರಿಕಾ ಘಟಕಗಳ ಮುಖ್ಯಸ್ಥರಾಗಿ ದುಡಿದಿದ್ದಾರೆ. ಮೃತರಿಗೆ ನಂದಿನಿ ನುಪಾನಿ, ಶೋಭನಾ ಭಾಟಿಯಾ(ಹಿಂದೂಸ್ತಾನ್ ಟೈಮ್ಸ್ ನ ಸಂಪಾದಕತ್ವ ಮಂಡಲಿ ಸಲಹಗಾರರು) ಹಾಗೂ ಸರೋಜ್ ಪೋತ್ದಾರ್ ಎಂಬ ಮೂವರು ಪುತ್ರಿಯರಿದ್ದಾರೆ. ಬಿರ್ಲಾ ಅವರ ಪತ್ನಿ ಮನೋರಮಾ ದೇವಿ ಬಿರ್ಲಾ ತಿಂಗಳ ಕೆಳಗೆ ಅಸುನೀಗಿದ್ದರು.
ಹಿಂದಿ ಸಾಹಿತ್ಯ ಪ್ರಚಾರಕ್ಕಾಗಿ ಕೆಕೆ ಬಿರ್ಲಾ ಫೌಂಡೇಷನ್ ಸ್ಥಾಪಿಸಿದರು. ಪಿಲಾನಿಯಲ್ಲಿರುವ ಬಿರ್ಲಾ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನಾಲಜೀಸ್ ನ ಕುಲಪತಿಯಾಗಿದ್ದರು. ಝೌರಿ-ಚಂಬಲ್ ರಸಗೊಬ್ಬರ ಕಂಪೆನಿಯ ಚೇರ್ ಮನ್ ಗಳಲ್ಲಿ ಒಬ್ಬರಾಗಿದ್ದರು. ದೇಶದ ದೊಡ್ಡ ಸಕ್ಕರೆ ಆಧಾರಿತ ಉತ್ಪನ್ನಗಳ ಸಂಸ್ಕರಣ ಘಟಕಕ್ಕೆ ಸಹಾ ಬಿರ್ಲಾಒಡೆಯರಾಗಿದ್ದರು.
(ಏಜೆನ್ಸೀಸ್)












Click it and Unblock the Notifications