ಬಿಎಂಟಿಸಿ, ಕೆಎಸ್ ಆರ್ ಟಿಸಿಬಸ್ ದರದಲ್ಲಿ ಏರಿಕೆ
ಬೆಂಗಳೂರು, ಆ. 29 : ಗುರುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಕೆಎಸ್ಆರ್ ಟಿಸಿ) ಯ ಬಸ್ ಪ್ರಯಾಣ ದರದಲ್ಲಿ ಹಠಾತ್ ಏರಿಕೆ ಮಾಡಲಾಗಿದೆ. ಹಣದುಬ್ಬರ ಇಳಿ ಮುಖವಾಗುತ್ತಿರುವ ಸಮಯದಲ್ಲಿ ತೈಲ ಬೆಲೆ ಸೇರಿದಂತೆ ಹಲವು ನೆಪ ಹೇಳುವ ಮೂಲಕ ಬಿಜೆಪಿ ಸರ್ಕಾರ ಶ್ರೀಸಾಮಾನ್ಯನಿಗೆ ಬರೆ ಎಳೆಯುವ ಕೆಲಸ ಮಾಡಿದೆ.
ಡೀಸೆಲ್ ದರದಲ್ಲಿನ ಏರಿಕೆ, ಸಂಸ್ಥೆಯ ತುಟ್ಟಿ ಭತ್ಯೆ ಬಿಡುಗಡೆ, ವೇತನ ಪರಿಷ್ಕರಣೆ ಮತ್ತಿತರ ಕಾರಣಗಳ ಹಿನ್ನೆಲೆಯಲ್ಲಿ ಬಿಎಂಟಿಸಿ ಪ್ರಯಾಣ ದರದಲ್ಲಿ ಶೇ. 9 ರಷ್ಟು ಹಾಗೂ ಕೆಎಸ್ಆರ್ ಟಿಸಿ ಪ್ರಯಾಣ ದರದಲ್ಲಿ ಶೇ. 10 ರಿಂದ 12 ರಷ್ಟು ಹೆಚ್ಚಳ ಮಾಡಲಾಗಿದೆ. ಇಂಧನ ಬೆಲೆ ಏರಿಕೆಯಾದಾಗ ಬಸ್ ಪ್ರಯಾಣದರ ಹೆಚ್ಚಿಸುವ ಪ್ರಸ್ತಾವನೆಯನ್ನು ಸಾರಿಗೆ ಸಚಿವ ಆರ್. ಅಶೋಕ್ ಮಾಡಿದ್ದರು. ಆದರೆ, ಜನಸಾಮಾನ್ಯರ ಪ್ರತಿರೋಧ ಎದುರಿಸುವ ಭಯದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಇದಕ್ಕೆ ಅನುಮತಿ ನೀಡಿರಲಿಲ್ಲ. ಇದೀಗ ಅಮೆರಿಕ ತೆರಳುವ ಮುನ್ನ ಅವರು ಬಸ್ ಪ್ರಯಾಣ ದರ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿಸಿ ವಿಮಾನವೇರಿದ್ದಾರೆ.
ಇಂಧನ ದರ , ಸಿಬ್ಬಂದಿ ತುಟ್ಟಿ ಭತ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಪ್ರಯಾಣ ದರ ಅನಿವಾರ್ಯ ಎಂದು ರಾಜ್ಯ ಸಾರಿಗೆ ನಿಗಮ ತಿಳಿಸಿದೆ. ಆದರೆ, ವಿದ್ಯಾರ್ಥಿ ರಿಯಾಯಿತಿ ಪಾಸ್ ದರದಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಎರಡೆರಡು ಬಾರಿ ಬಿಎಂಟಿಸಿ ಬಸ್ ಪಾಸ್ ದರ ಏರಿಕೆ
ಕರ್ನಾಟಕ ಸಾರಿಗೆ ಸಂಸ್ಥೆ ಪ್ರಯಾಣದರದಲ್ಲಿ ಏರಿಕೆ
ಬಿಎಂಟಿಸಿಯಿಂದ ಆನ್‌ಲೈನಲ್ಲಿ ಟಿಕೆಟ್ ಬುಕಿಂಗ್ ಸೇವೆ












Click it and Unblock the Notifications