ಮಳೆಯ ಅಬ್ಬರಕ್ಕೆ ದಕ್ಷಿಣ ಒಳನಾಡಿನಲ್ಲಿ 5 ಸಾವು
ಬೆಂಗಳೂರು, ಆ.29: ದಕ್ಷಿಣ ಕರ್ನಾಟಕದ ಒಳನಾಡಿನ ವಿವಿಧ ಭಾಗಗಳಲ್ಲಿ ಗುರುವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಅಪ್ರಾಪ್ತ ಬಾಲಕಿ, ಮಹಿಳೆಯೊಬ್ಬರು ಸೇರಿದಂತೆ ಒಟ್ಟು 5 ಮಂದಿ ಮೃತಪಟ್ಟಿದ್ದಾರೆ.
ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಕನಿಷ್ಠ ಪಕ್ಷ 4000 ಎಕರೆ ಪ್ರದೇಶದಷ್ಟು ಬೆಳೆಯನ್ನು ನುಂಗಿ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಸನ ಜಿಲ್ಲೆಯಾದ್ಯಂತ ಅತಿ ಹೆಚ್ಚು ಮಳೆ ಸುರಿದಿದ್ದು ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಸಹ ನಷ್ಟವಾಗಿದೆ. ಹಾಗೆಯೇ ಬಳ್ಳಾರಿ, ಚಾಮರಾಜನಗರ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳೂ ಮಳೆಯ ಅಬ್ಬರಕ್ಕೆ ನಲುಗಿ ಹೋಗಿವೆ.
ಗುರುವಾರ ಆಕಾಶ ಭೂಮಿಯನ್ನು ಒಂದಾಗುವಂತೆ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಹೊಲಕ್ಕೆ ಹೋದ ಹಾಸನ ಜಿಲ್ಲೆಯ ಕಿತ್ತಾಣಿ ಗ್ರಾಮದ ಇಬ್ಬರು ರೈತರು ಸಾವನ್ನಪ್ಪಿದ್ದಾರೆ. ಮೃತರನ್ನ್ನು ಸ್ವಾಮಿ ಗೌಡ (45) ಮತ್ತು ನಾಗಶೆಟ್ಟಿ (50) ಎಂದು ಗುರುತಿಸಲಾಗಿದೆ. ತಾಯಿಯೊಂದಿಗೆ ಹೊಳೆ ದಾಟುತ್ತ್ತಿದ್ದ 10 ವರ್ಷದ ಮಗು ನೀರಿನಲ್ಲಿ ಕೊಚ್ಚಿ ಹೋದ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಅಲಬನೂರಿನಲ್ಲಿ ನಡೆದಿದೆ. ಹೊಲದ ಕೆಲಸ ಮುಗಿಸಿ ಬೇಗ ಮನೆ ಸೇರಬೇಕೆಂಬ ಧಾವಂತದಲ್ಲಿದ್ದ ಧರ್ಮರಾಜು (40) ಎಂಬವರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದು ಅವರ ಪತ್ನಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನೆಲ್ಲಿಗೆರೆ ಗ್ರಾಮದಲ್ಲಿ ಸಂಭವಿಸಿದೆ. ಭಾರಿ ಮಳೆಗೆ ಮನೆ ಕುಸಿದು ಬಿದ್ದು ಅದರ ಅಡಿಗೆ ಸಿಕ್ಕಿಬಿದ್ದ ತುಮಕೂರು ಜಿಲ್ಲೆ ಕಲ್ಲೂರು ಕ್ರಾಸಿನ ಬಳಿ ಹೊನ್ನಮ್ಮ (65) ಮೃತಪಟ್ಟಿದ್ದಾರೆ.
ಸುರಿಯುತ್ತಿರುವ ಮುಸಲಧಾರೆಗೆ ಪ್ರಮುಖ ಜಲಾಶಯಗಳಾದ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಹಾಗೂ ಮೈಸೂರಿನ ಕೃಷ್ಣರಾಜ ಸಾಗರ ಗರಿಷ್ಠ ಮಟ್ಟವನ್ನು ತಲುಪಿವೆ ಎಂದು ಮೂಲಗಲು ತಿಳಿಸಿವೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications