ಜಮ್ಮು ಒತ್ತೆಯಾಳು ಪ್ರಕರಣ ಖತಂ
ಜಮ್ಮು, ಆ. 28 : ಅಮರನಾಥ ವಿವಾದದಿಂದ ತತ್ತರಿಸಿದ್ದ ಜಮ್ಮುವಿಗೆ ಬುಧವಾರ ಮತ್ತೊಂದು ಮರ್ಮಾಘಾತ ಕಾದಿತ್ತು. ಅಮರನಾಥ ಗಲಭೆಯಿಂದ ಸಹಜಸ್ಥಿತಿಗೆ ಮರಳುವಷ್ಟರಲ್ಲಿ ಉಗ್ರರ ಆಗಮನ. ಅಮಾಯಕ ಹಾಲುಗಲ್ಲದ ಕಂದಮ್ಮಗಳು, ಮಹಿಳೆಯರ ಮೇಲೆ ಉಗ್ರರು ದಬ್ಬಾಳಿಕೆ. ನಿರಂತರ 16 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರನ್ನು ದಮನ ಮಾಡಲು ಭದ್ರತಾ ಪಡೆ ಯಶಸ್ವಿಯಾಯಿತು.
ಬುಧವಾರ ಪೊಲೀಸ್ ವೇಷದಲ್ಲಿ ಬಂದ ಮೂರು ಉಗ್ರರು ಜಮ್ಮು ಹೊರವಲಯದ ಚಿನೋರ್ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿ, ಅಲ್ಲಿ ಮನೆ ಪಾಠ ಹೇಳಿಸಿಕೊಳ್ಳಲು ತೆರಳುತ್ತಿದ್ದ 3 ರಿಂದ 9 ವರ್ಷ ವಯಸ್ಸಿನ ನಾಲ್ಕು ಮಕ್ಕಳು ಸೇರಿ 7 ಜನರನ್ನು ಒತ್ತೆಯಾಳಾಗಿಸಿಕೊಳ್ಳುವ ಮೂಲಕ ಇಡೀ ಜಮ್ಮುವೇ ಬೆಚ್ಚಿಬೀಳುವಂತೆ ಮಾಡಿದ್ದಾರೆ. ಆದರೆ ಸೇನಾಪಡೆಗಳು ಬೆಳಗ್ಗೆ 7 ರಿಂದಲೇ 16 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ರಾತ್ರಿ ಹೊತ್ತಿಗೆ ಮನೆ ಹೊಕ್ಕಿದ್ದ ಮೂವರೂ ಉಗ್ರರನ್ನು ಕೊಂದು ಹಾಕಿದ್ದಾರೆ.
ಗುಂಡಿನ ಕಾಳಗದಲ್ಲಿ ನಡೆದ ಸ್ಥಳದಲ್ಲಿ ನಾಗರಿಕನೊಬ್ಬನ ಶವವೂ ದೊರೆತಿದೆ. ಆದರೆ ಒತ್ತೆಯಾಳು ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಒತ್ತೆಯಾಳಗಿದ್ದ ಮಕ್ಕಳಲ್ಲಿ ಅತಿ ಕಿರಿಯನಾದ ವಿಪಿನ್ ಕುಮಾರ್ 2 ವರ್ಷದ ಹಸುಳೆ, ಕಾಜಲ್(4), ಇಶಾಂತ್ (6) ಹಾಗೂ ಶೀತಲ್ (9) ಎನ್ನಲಾಗಿದೆ. ಮನೆಯೊಳಗೆ ನುಗ್ಗುವ ಮುನ್ನ ಉಗ್ರರು ಬುಧವಾರ ಸೇನಾಧಿಕಾರಿ ಸೇರಿದಂತೆ ನಾಲ್ಕು ಮಂದಿಯನ್ನು ಕೊಂದು ಹಾಕಿದ್ದರು.
(ದಟ್ಸ್ ಕನ್ನಡ ವಾರ್ತೆ)
ಕಾಶ್ಮೀರ ಮತ್ತೆ ಉದ್ವಿಗ್ನ : ನಿಷೇಧಾಜ್ಞೆ ಮುಂದುವರಿಕೆ












Click it and Unblock the Notifications