ಅರಣ್ಯದಲ್ಲಿ ಗಣಿಗಾರಿಕೆ : ಬಿಎಸ್‌ವೈ ವಿರುದ್ಧ ಎಚ್‌ಡಿಕೆ ಕಿಡಿ
ಬೆಂಗಳೂರು, ಆ. 23 : ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಮಾಡದಂತೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆಯಾಗಿದ್ದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಜಾತ್ಯತೀತ ಜನತಾದಳದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಯಡಿಯೂರಪ್ಪ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧ ಹೇರಬೇಕೆಂದು ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆಜ್ಞೆಗೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದ್ದಕ್ಕೆ ಪ್ರತಿಯಾಗಿ ಮಾತನಾಡುತ್ತಿದ್ದ ಕುಮಾರಸ್ವಾಮಿ ಶನಿವಾರ ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.
ಒಂದೆಡೆ ಅರಣ್ಯವನ್ನು ರಕ್ಷಿಸುತ್ತೇನೆಂದು ಹೇಳುತ್ತಿದೆ ಮತ್ತೊಂದೆಡೆ ಸರ್ಕಾರಿ ವಕೀಲರು ಕೋರ್ಟಿಗೆ ಬರದಂತೆ ಮಾಡಿ ಮೊದಲು ನೀಡಿದ್ದ ಆಜ್ಞೆಗೆ ತಡೆಯಾಗುವಂತೆ ಮಾಡಿದ್ದಾರೆ. ಯಡಿಯೂರಪ್ಪ ಸರ್ಕಾರ ಈ ವಿಷಯದಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿದೆ. ವಿಚಾರಣೆ ಸಂದರ್ಭದಲ್ಲಿ ಸರ್ಕಾರಿ ವಕೀಲರು ಗೈರಾಗಿದ್ದೇ ಮೊದಲಿನ ಆಜ್ಞೆಗೆ ತಡೆಯಾಗಲು ಕಾರಣ ಎಂದು ಕುಮಾರಸ್ವಾಮಿ ಅರೋಪಿಸಿದರು.
ಸರ್ಕಾರದಲ್ಲಿರುವ ಮೂವರು ಗಣಿ ಮಾಲಿಕರ ಹಿತಾಸಕ್ತಿ ಕಾಯಲೆಂದೇ ಸರ್ಕಾರ ಈ ರೀತಿ ನಡೆದುಕೊಂಡಿದೆ. ಗಣಿಧಣಿಗಳಿಗೆ ಅರಣ್ಯದಲ್ಲಿ ಗಣಿಗಾರಿಕೆ ಮಾಡಲು ಅನುವಾಗುವಂತೆ ಯಡಿಯೂರಪ್ಪ ನಡೆದುಕೊಂಡಿದ್ದಾರೆ. ಇದು ಸರ್ಕಾರದ ವೈಫಲ್ಯ. ಸರ್ಕಾರ ಈ ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಕುಮಾರಸ್ವಾಮಿ ಕಿಡಿ ಕಾರಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಅರಣ್ಯದಲ್ಲಿ ಗಣಿಗಾರಿಕೆ ನಿಷೇಧದ ತೀರ್ಪಿಗೆ ತಡೆ












Click it and Unblock the Notifications