ತೈಲ ಬೆಲೆ ಹೆಚ್ಚಳವಿಲ್ಲ ಕೇಂದ್ರ ಸರ್ಕಾರ ಸ್ಪಷ್ಟನೆ
ಬೆಂಗಳೂರು, ಆ. 20 : ಮುಂದಿನ ವರ್ಷ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರದ ಯುಪಿಎ ಸರ್ಕಾರ ತೈಲ ಬೆಲೆಯನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು ಹೋಗಲು ನಿರ್ಧರಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರದ ಇಂಧನ ಖಾತೆಯ ಸಚಿವ ಮುರಳಿ ದಿಯೊರಾ ಅವರು ಸ್ಪಷ್ಟಪಡಿಸಿದ್ದು, ಹಣದುಬ್ಬರ ದಿನದಿಂದ ದಿನಕ್ಕೆ ಗಗನಮುಖಿಯಾಗಿದೆ. ತೈಲ ಬೆಲೆ ಪರಾಮರ್ಶೆಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ರಚಿಸಿರುವ ಬಿ.ಕೆ.ಚತುರ್ವೇದಿ ಕಮೀಟಿ ಪ್ರತಿ ತಿಂಗಳಗೊಮ್ಮೆ ಪ್ರತಿ ಲೀಟರ್ ಗೆ ಪೆಟ್ರೋಲ್ ಗೆ 2.50 ರುಪಾಯಿ ಮತ್ತು ಪ್ರತಿ ಲೀಟರ್ ಡಿಸೇಲ್ ಗೆ 75 ಪೈಸೆಯನ್ನು ನಿಯಮಿತವಾಗಿ 2009ರ ಮಾರ್ಚ್ ವರೆಗೂ ಏರಿಸಬೇಕು ಎಂದು ಅಭಿಪ್ರಾಯಪಟ್ಟಿತ್ತು. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ವಸ್ತುಗಳ ಬೆಲೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ತೈಲ ಬೆಲೆಯನ್ನು ಹೆಚ್ಚಿಸದಿರಲು ಕಾರಣವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಆದರೆ ಹಣದುಬ್ಬರದಿಂದ ಅಗತ್ಯ ವಸ್ತುಗಳ ಬೆಲೆಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿವೆ. ಜನಸಾಮಾನ್ಯರ ಕಷ್ಟವನ್ನು ಗಮನದಲ್ಲಿಟ್ಟುಕೊಂಡು ತೈಲ ಬೆಲೆಯನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು. ಮುಂದಿನ ವರ್ಷ ಎಪ್ರೀಲ್ ತಿಂಗಳಲ್ಲಿ ಲೋಕಸಭೆ ಚುನಾವಣೆಯನ್ನು ಎದುರಿಸಬೇಕಿರುವ ಹಿನ್ನೆಲೆಯಲ್ಲಿ ತೈಲ ಬೆಲೆಯನ್ನು ಯಥಾಸ್ಥಿತಿಗೆ ಕಾಪಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಹಣದುಬ್ಬರ ಹಾಗೂ ತೈಲ ಬೆಲೆ ಹೆಚ್ಚಳವನ್ನು ವಿರೋಧಿಸಿದ್ದವು. ಚುನಾವಣೆ ಸಮೀಪಿಸುತ್ತಿರುವುದರಿಂದ ತೈಲ ಬೆಲೆ ಏರಿಕೆಯಂಥ ತಪ್ಪು ಮಾಡಬಾರದು ಎನ್ನುವುದು ಯುಪಿಎಗೆ ತಡವಾಗಿ ಅರ್ಥವಾದಂತಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications