ಬಿಜಾಪುರ ಶಾಖೋತ್ಪನ್ನ ಘಟಕಕ್ಕೆ ಭಾವಿ ಬೆಂಬಲ
ಬಿಜಾಪುರ,ಆ.20: ಶಾಖೋತ್ಪನ್ನ ವಿದ್ಯುತ್ ಘಟಕಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲದ ಕಾರಣ ಜನ ಬಿಜಾಪುರದಲ್ಲಿ ಸ್ಥಾಪಿಸುತ್ತಿರುವ 4,000 ಮೆಗಾ ವ್ಯಾಟ್ ಸಾಮರ್ಥ್ಯದ ಶಾಖೋತ್ಪನ್ನ ಘಟಕಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು 'ನೀರು ಬೇಕು' ಸಮಿತಿಯ ಅಧ್ಯಕ್ಷ ವಿಶ್ವನಾಥ್ ಭಾವಿ ತಿಳಿಸಿದ್ದಾರೆ.
ಶಾಖೋತ್ಪನ್ನ ಘಟಕದಿಂದ ಹೊರಬೀಳುವ ತ್ಯಾಜ್ಯಗಳನ್ನು ಸಂಸ್ಕರಿಸುವ ಕಾರಣ ಮಾಲಿನ್ಯವನ್ನು ತಡೆಗಟ್ಟಲಾಗುತ್ತದೆ. ಇಲ್ಲಿ ಬಳಸುವ ನೀರನ್ನು ಸಹ ಮರುಬಳಕೆ ಮಾಡಲಾಗುತ್ತದೆ. ಘಟಕದಿಂದ ಹೊರಬೀಳುವ ಹಾರು ಬೂದಿಯನ್ನು ಸಿಮೆಂಟ್ ಕಂಪನಿಗಳಲ್ಲಿ ಬಳಕೆಯಾಗುತ್ತಿದೆ ಎಂದು ಭಾವಿ ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ರಾಯಚೂರು ಶಾಖೋತ್ಪನ್ನ ಘಟಕದ ಬಗ್ಗೆ ಉದಾಹರಿಸುತ್ತಾ, ತ್ಯಾಜ್ಯ ನಿರ್ವಹಣೆಯಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಕಾರಣ ಈ ಘಟಕಕ್ಕೆ ಐಎಸ್‌ಒ 14001 ಪ್ರಮಾಣ ಪತ್ರವನ್ನು ನೀಡಲಾಗಿದೆ. ಘಟಕದ 100 ಕಿ.ಮೀ ಸುತ್ತಳತೆಯಲ್ಲಿನ ಬೆಳೆಗಳು ನಾಶವಾಗುತ್ತವೆ ಎಂದು ಪರಿಸರವಾದಿಗಳು ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸಿ ರೈತರಲ್ಲಿ ಭಯ ಉಂಟು ಮಾಡುತ್ತಿದ್ದಾರೆ ಎಂದು ಭಾವಿ ಪರಿಸರವಾದಿಗಳ ಬಗ್ಗೆ ಕಿಡಿಕಾರಿದ್ದಾರೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications