ವಿನಿವಿಂಕ್ ಶಾಸ್ತ್ರಿ ಪ್ರಕರಣದ ಸಿಒಡಿ ತನಿಖೆ ಪೂರ್ಣ
ಬೆಂಗಳೂರು,ಆ.13:ವಿನಿವಿಂಕ್ ವಂಚನೆ ಪ್ರಕರಣದ ತನಿಖೆಯನ್ನು ಸಿಒಡಿ ಪೂರ್ಣಗೊಳಿಸಿದ್ದು ಕೆ.ಎನ್.ಶ್ರೀನಿವಾಸ ಶಾಸ್ತ್ರಿ ಸೇರಿದಂತೆ ಒಟ್ಟು 20 ಮಂದಿ ಆರೋಪಿಗಳ ವಿರುದ್ಧ ಬುಧವಾರ 4ನೇ ಎಸಿಎಂಎಂ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಈ ಬಗ್ಗೆ ವಿವರ ನೀಡಿದ ಸಿಒಡಿ ಪೊಲೀಸ್ ಮಹಾನಿರ್ದೇಶಕ ಡಾ.ಅಜಯ್‌ಕುಮಾರ್ ಸಿಂಗ್, ಒಟ್ಟು 14 ಪ್ರಕರಣಗಳಲ್ಲಿ 203 ಕೋಟಿ ರು.ವ್ಯವಹಾರ ನಡೆಸಲಾಗಿದ್ದು ಸುಮಾರು 20,118 ಠೇವಣಿದಾರರು ಹಣ ಹೂಡಿದ್ದರು ಎಂದು ಅವರು ಪತ್ರಕರ್ತರಿಗೆ ತಿಳಿಸಿದರು. ನ್ಯಾಯಾಂಗ ಬಂಧನದಲ್ಲಿರುವ ವಿನಿವಿಂಕ್ ಅಧ್ಯಕ್ಷ ಶ್ರೀನಿವಾಸ ಶಾಸ್ತ್ರಿ, ಉಪಾಧ್ಯಕ್ಷ ಲೋಕೇಶ್ ಹಾಗೂ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಇತರ 18 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ತಮ್ಮ ವಿನಿವಿಂಕ್ ಸಂಸ್ಥೆಯ ಮೂಲಕ ಒಟ್ಟು 2184 ಜನರಿಗೆ 203 ಕೋಟಿ ರು. ವಂಚಿಸಿದ್ದರು. ವಿನಿವಿಂಕ್ ಶಾಸ್ತ್ರಿ ವಿರುದ್ಧ ರಾಜ್ಯಾದ್ಯಂತ ಒಟ್ಟು 14 ಪ್ರಕರಣಗಳು ದಾಖಲಾಗಿದ್ದ್ದು 2005ರಲ್ಲಿ ಸಿಒಡಿ ತನಿಖೆ ಆರಂಭಿಸಲಾಗಿತ್ತು. ನಗದು ಹಣ 3,99,95,155, ಚೆಕ್ ಹಾಗೂ ಡಿಡಿಗಳ ರೂಪದಲ್ಲಿ 1,18,087, ಚಿನ್ನಾಭರಣ 817 ಗ್ರಾಂ, ಬೆಳ್ಳಿ 25.43 ಕೆ.ಜಿ, 20 ವಾಹನಗಳನು ಜಪ್ತಿ ಮಾಡಲಾಗಿದೆ.
(ದಟ್ಸ್‌ಕನ್ನಡ ವಾರ್ತೆ)











Click it and Unblock the Notifications