ಗಣಿಗಾರಿಕೆ ತಡೆಯಲು ಕೇಂದ್ರಕ್ಕೆ ಪತ್ರ : ಯಡಿಯೂರಪ್ಪ
ಬೆಂಗಳೂರು, ಆ. 11 : ರಾಜ್ಯದ ಹೈಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಗಣಿಗಾರಿಕೆ ನಡೆಸಲು ನೂತನವಾಗಿ ಹೊಸ ಅರ್ಜಿಗಳಿಗೆ ಅನುಮತಿ ನೀಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದಲ್ಲಿ ಗಣಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕರಡು ನೀತಿಯನ್ನು ಶೀಘ್ರದಲ್ಲಿ ಪ್ರಕರಟಿಸಲಾಗುವುದು ಎಂದರು. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಸರ್ಕಾರ ಅವಕಾಶ ಮಾಡಿಕೊಡಬಾರದು, ನೈಸರ್ಗಿಕ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕಾಗಿದೆ ಎಂದು ಸರ್ಕಾರಕ್ಕೆ ರಾಜ್ಯ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲು ಸರ್ಕಾರ ಬದ್ದವಾಗಿದೆ ಭರವಸೆ ನೀಡಿದರು.
ಹೊಸದಾಗಿ ಗಣಿಗಾರಿಕೆ ನಡೆಸಲು ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಅನೇಕ ಜನರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳಿಗೆ ಮಾನ್ಯತೆ ನೀಡದೆ, ತಿರಸ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲಿ ಪತ್ರ ಬರೆಯುವುದಾಗಿ ಯಡಿಯೂರಪ್ಪ ಸ್ಸಷ್ಟಪಡಿಸಿದರು. ರಾಜ್ಯದಿಂದ ಒಟ್ಟು 538 ಅರ್ಜಿಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಅದರಲ್ಲಿ 138 ಅರ್ಜಿಗಳು ಕಬ್ಬಿಣ ಅದಿರು ಗಣಿಗಾರಿಕೆ ನಡೆಸಲು ಅನುಮತಿ ಕೋರಲಾಗಿದೆ. ಒಟ್ಟು 15647 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ವಿವರಿಸಿದ ಯಡಿಯೂರಪ್ಪ, ಇದರಿಂದ ಅಪಾರ ಸಂಪತ್ತು ನಾಶ ಆಗುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಗಣಿಗಾರಿಕೆಯನ್ನು ನಿರ್ಬಂಧಿಸಲು ರಾಜ್ಯ ಸರ್ಕಾರ ಎಲ್ಲ ಕ್ರಮಕೈಗೊಳ್ಳಲು ಸಿದ್ದವಾಗಿದೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಗಣಿ ವಿಚಾರಕ್ಕೆ ಹೈಕೋರ್ಟ್ ಸಲಹೆ ಸೂಕ್ತ: ಯಡಿಯೂರಪ್ಪ