ಉಗ್ರರ ದಮನಕ್ಕೆ ರಾಜ್ಯದಲ್ಲಿ ಕೋಕಾ ಅಸ್ತ್ರ ಪ್ರಯೋಗ
ಬೆಂಗಳೂರು, ಆ. 11 : ಭಯೋತ್ಪಾದನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ (ಕೋಕಾ) ಕಾಯಿದೆಯನ್ನು ಜಾರಿಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮುಂದಿನ ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸಿ ಕಾಯಿದೆಯ ಸಾಧಕ ಬಾಧಕಗಳನ್ನು ಅವಲೋಕಿಸಿ ಜಾರಿಗೆ ತರುವ ಮುನ್ಸೂಚನೆಯನ್ನು ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ನೀಡಿದರು.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕೋಕಾ ಕಾಯಿದೆ ಜಾರಿಗೂ ಮುನ್ನ ಸುಗ್ರಿವಾಜ್ಞೆ ಹೊರಡಿಸಲಾಗುವುದು ಎಂದರು. ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಿಸುವ ಮೂಲಕ ಉಗ್ರವಾದಿಗಳು ಅಟ್ಟಹಾಸ ಮೆರೆದಿದ್ದರು. ಈ ಸಂಬಂಧ ಬೆಳಗಾವಿ, ಹುಬ್ಬಳ್ಳಿ, ಬಿಜಾಪುರ, ಗುಲ್ಬರ್ಗಾಗಳಲ್ಲಿ ಶಂಕಿತ ಭಯೋತ್ಪಾದಕರನ್ನು ಪೊಲೀಸರು ಬಂಧಿಸುತ್ತಿರುವ ಹಿನ್ನೆಲೆಯಲ್ಲಿ ಕೋಕಾ ಕಾಯಿದೆ ಜಾರಿಗೊಳಿಸುವುದು ಅನಿವಾರ್ಯ ಎನ್ನುವ ಅಭಿಪ್ರಾಯಗಳು ಕೇಳಿ ಬಂರುತ್ತಿವೆ. ಈ ಹಿನ್ನೆಲೆಯಲ್ಲಿ ಕೋಕಾ ಜಾರಿಗೊಳಿಸಿದಲ್ಲಿ ಉಗ್ರರ ಅಟ್ಟಹಾಸವನ್ನು ನಿಯಂತ್ರಿಸಬಹುದಾಗಿದೆ ಎಂದು ಸಚಿವರು ಸಮರ್ಥಿಸಿಕೊಂಡರು.
ಮಹಾರಾಷ್ಟ್ರದಲ್ಲಿ ಉಗ್ರರ ಕೃತ್ಯಗಳು ಹೆಚ್ಚಿತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧ ಗಳ ನಿಯಂತ್ರಣ ಕಾಯಿದೆ(ಮೋಕಾ) 1999ರಲ್ಲಿ ಜಾರಿಗೆ ತಂದಿತ್ತು. ಈ ಕಾಯಿದೆ ಜಾರಿಯಿಂದ ಅಪರಾಧಿ ಕೃತ್ಯಗಳನ್ನು ತಡೆಯುವಲ್ಲಿ ಅಲ್ಲಿನ ಸರ್ಕಾರ ಯಶಸ್ವಿಯಾಗಿತ್ತು. ಉಗ್ರರ ಕೃತ್ಯಗಳೂ ನಿಯಂತ್ರಣಕ್ಕೆ ತರಲು ಈ ಕಾಯಿದೆಯಿಂದ ಸಾಧ್ಯವಾಗಿದೆ ಎಂದು ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಆರ್.ಆರ್. ಪಾಟೀಲ್ ಅನೇಕ ಸಲ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಿತದೃಷ್ಠಿಯಿಂದ ಕೋಕಾ ಕಾಯಿದೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಈ ಕುರಿತು ಶೀಘ್ರದಲ್ಲಿ ಸುಗ್ರಿವಾಜ್ಞೆ ಹೊರಡಿಸಲಾಗುವುದು ಎಂದು ಆಚಾರ್ಯ ಸ್ಪಷ್ಟಪಡಿಸಿದರು. ಉಗ್ರರ ವಿಧ್ವಂಸಕ ಕೃತ್ಯಗಳನ್ನು ತಡೆಯಲು ಫೋಟಾ ಕಾಯಿದೆಯನ್ನು ಜಾರಿ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಅವರು ಆಗ್ರಹಿಸಿದರು.
ಬೆಳಗಾವಿಯಲ್ಲಿ ನಡೆಯಲಿರುವ ಮುಂದಿನ ಅಧಿವೇಶನದಲ್ಲಿ ಕೋಕಾ ಕಾಯಿದೆ ಬಗ್ಗೆ ಸಮಗ್ರ ಚರ್ಚೆಯಾಗುವ ಸಂಭವವಿದೆ. ಅಧಿವೇಶನದಲ್ಲಿ ಸಂಪೂರ್ಣವಾಗಿ ಚರ್ಚೆ ನಡೆಸಿ ಕಾಯಿದೆಯ ಸಾಧಕ ಬಾಧಕಗಳನ್ನು ಅವಲೋಕಿಸಿ ಕೆಲ ತಿದ್ದುಪಡಿ ಮಾಡುವ ಮೂಲಕ ಕೋಕಾ ಜಾರಿಗೆ ತರಲಾಗುವುದು ಎಂದು ಹೇಳಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ತನಿಖೆ ಮುಂದುವರೆದಿದೆ. ಸ್ಫೋಟ ಕುರಿತ ಮಹತ್ವದ ಮಾಹಿತಿ ದೊರಕಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications