ದತ್ತ ಪೀಠ : ಸರ್ಕಾರದ ಮೇಲ್ಮನವಿ ತಿರಸ್ಕೃತ
ಬೆಂಗಳೂರು, ಆ. 5 : ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯ ಗುರು ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾದಲ್ಲಿನ ದತ್ತ ಪೀಠಕ್ಕೆ ಸಂಬಂಧಿಸಿದ ಪೂಜಾ ವಿಧಿವಿಧಾನಗಳ ಬಗ್ಗೆ ಸರಿಯಾದ ವಿಚಾರಣೆ ನಡೆಸಿ ಕಾನೂನಿಗೆ ಅನುಗುಣವಾಗಿ ಹೊಸದಾಗಿ ಆದೇಶ ಹೊರಡಿಸುವಂತೆ ಧಾರ್ಮಿಕದತ್ತಿ ಇಲಾಖೆಗೆ ಹೈಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.
2007ರ ಫೆಬ್ರುವರಿ 14ರಂದು ಏಕಸದಸ್ಯಪೀಠ ಹೊರಡಿಸಿದ್ದ ಇದೇ ಆದೇಶವನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ದೀಪಕ್ ವರ್ಮಾ ಹಾಗೂ ನ್ಯಾಯಮೂರ್ತಿ ಎ.ಎ.ಭೂಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಎತ್ತಿ ಹಿಡಿದಿದೆ. ಜತೆಗೆ ದತ್ತ ಪೀಠದಲ್ಲಿ ಎರಡು ಕೋಮಿನ ಭಾವನೆಗೆ ದಕ್ಕೆಯಾಗದ ರೀತಿಯಲ್ಲಿ ಪೂಜಾಚರಣೆಗೆ ಅವಕಾಶ ಮಾಡಿಕೊಡುವಂತೆ ಧಾರ್ಮಿಕ ದತ್ತಿ ಹಾಗೂ ಧರ್ಮ ಸಹಾಯ ಇಲಾಖೆಗೆ ಸೂಚನೆ ನೀಡಿದೆ. ಈ ಹಿಂದೆ ದತ್ತಪೀಠದಲ್ಲಿ ಹಿಂದು ಧಾರ್ಮಿಕ ಆಚರಣೆಗೆ ಅನುವು ಮಾಡಲು ಸೂಚಿಸಿದ್ದ ಹೈಕೋರ್ಟ್ ನ ಏಕ ಸದಸ್ಯ ಪೀಠ, ಅಗತ್ಯ ಬಿದ್ದರೆ ಅರ್ಚಕರ ನೇಮಕ ಮಾಡಿಕೊಳ್ಳುವಂತೆ ಧಾರ್ಮಿಕ ದತ್ತಿ ಇಲಾಖೆಗೆ ಸೂಚಿಸಿತ್ತು.
ಆದರೆ, ಈ ಆದೇಶವನ್ನು ಪ್ರಶ್ನಿಸಿ ಆಗಿನ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ವಾದ ವಿವಾದ ಆಲಿಸಿದ ನ್ಯಾಯಪೀಠ, ಏಕ ಸದಸ್ಯ ಪೀಠದ ತೀರ್ಪಿನಲ್ಲಿ ಯಾವುದೇ ಆಕ್ಷೇಪಾರ್ಹ ಅಂಶವಿಲ್ಲ. ಧಾರ್ಮಿಕ ಸೌಹಾರ್ದ ಕಾಪಾಡುವ ಅಂಶಗಳಿವೆ. ಈ ಹಿನ್ನೆಲೆಯಲ್ಲಿ ಮನವಿಯನ್ನು ಅನೂರ್ಜಿತಗೊಳಿಸುವುದಾಗಿ ತಿಳಿಸಿತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications