ಬಾಬಾ ಅಮ್ಟೆ ಪುತ್ರ ಪ್ರಕಾಶ್ ಅಮ್ಟೆಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ
ನವದೆಹಲಿ, ಜು. 31 : ಸಮಾಜ ಸೇವಕ ಬಾಬಾ ಅಮ್ಟೆ ಅವರ ಪುತ್ರ ಡಾ.ಪ್ರಕಾಶ್ ಅಮ್ಟೆ ಹಾಗೂ ಅವರ ಪತ್ನಿ ಮಂದಾಕಿನಿ ಅವರಿಗೆ 2008ರ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಲಭಿಸಿದೆ. ಪ್ರಕಾಶ್ ಹಾಗೂ ಮಂದಾತಾಯಿ ಎಂದೇ ಖ್ಯಾತರಾಗಿರುವ ಅವರ ಪತ್ನಿ ಮಂದಾಕಿನಿ ಅವರು ಹಿಂದುಳಿದ ಜನಾಂಗವಾದ ಮಡಿಯಾ ಗೂಂಡಾ ಸಮಾಜದ ಏಳಿಗೆಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ್ದಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಂದೆ ಬಾಬಾ ಅಮ್ಟೆ ಅವರು ಹಾದಿಯನ್ನು ಹಿಡಿದಿರುವ ಪ್ರಕಾಶ್, ಸಮಾಜದಿಂದ ದೂರವಿರುವ ದೀನರ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟರು. ಪತಿಯ ಕಾಯಕವನ್ನು ಮೆಚ್ಚಿ ಪತ್ನಿ ಮಂದಾಕಿನಿ ಗಂಡನಿಗೆ ಸಾಥ್ ನೀಡಿದರು. 1975ರಿಂದ ಆರಂಭಿಸಿದ ಸೇವೆ ಇನ್ನೂ ಮುಂದುವರೆದಿದೆ. ವೃತ್ತಿಯಲ್ಲಿ ಅಮ್ಟೆ ದಂಪತಿಗಳು ವೈದ್ಯರು, ಮನಸ್ಸು ಮಾಡಿದ್ದರೆ ದೊಡ್ಡ ನಗರಗಳಲ್ಲಿ ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ ತಂದೆಯ ಪ್ರಭಾವ ಕಾರಣ ಪ್ರಕಾಶ್ ಅವರ ಚಿತ್ತ ದೀನರ ಏಳ್ಗೆಯತ್ತ ವಾಲಿತು. ಅಲ್ಲಿಂದ ಸತತ 30 ವರ್ಷಗಳ ಕಾಲ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಸಮಾಜದಿಂದ ಇರುವ ಮಡಿಯಾ ಗೂಂಡಾ ಜನಾಂಗಕ್ಕಾಗಿ ಆಸ್ಪತ್ರೆಯೊಂದನ್ನು ಕಟ್ಟಿಸಿ ಉಚಿತ ಚಿಕಿತ್ಸೆಯ ಜತೆಗೆ ಕ್ಷಯ, ಮಲೇರಿಯ ಸೇರಿದಂತೆ ಅನೇಕ ಕಾಯಿಲೆಗಲಿಗೆ ಉಚಿತ ಚಿಕಿತ್ಸೆಯ ಜತೆಗೆ ಆ ಸಮುದಾಯಕ್ಕೆ ಅಕ್ಷರ ಜ್ಞಾನ ಮೂಡಿಸುವ ಮೂಲಕ ಅವರನ್ನು ಪ್ರಜ್ಞಾವಂತರನ್ನಾಗಿ ಮಾಡಿದರು. ಜೀವನ ನಡೆಸುವ ಕ್ರಮವನ್ನು ಕಲಿಸಿ ಸ್ವತಂತ್ರವಾಗಿ ಬಾಳುವುದನ್ನು ಕಲಿಸಿಕೊಟ್ಟಿದ್ದಾರೆ. ಎಲ್ಲ ಸಾಧನೆಗಳನ್ನು ಪರಿಗಣಿಸಿದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ನೀಡಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications