ಸ್ಪೋಟಗಳ ಹಿಂದೆ ಭಯೋತ್ಪಾದಕರ ಕೈವಾಡ :ಬಿದರಿ
ಬೆಂಗಳೂರು, ಜು. 25 : ಬೆಂಗಳೂರಿನ ಐದು ವಿವಿಧ ಸ್ಥಳಗಳಲ್ಲಿ ಭೀಕರ ಸ್ಫೋಟಗಳು ಸಂಭವಿಸಿದ್ದು, ಇದರ ಹಿಂದೆ ಭಯೋತ್ಪಾದಕರ ಕೈವಾಡವಿರಬಹುದು ಎಂದು ಬೆಂಗಳೂರು ಪೊಲೀಸ ಆಯುಕ್ತ ಶಂಕರ್ ಬಿದರಿ ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಫೋಟ ನಡೆದ ಎಲ್ಲ ಪ್ರದೇಶಗಳಲ್ಲಿ ಸ್ಫೋಟ ನಿಗ್ರಹ ದಳ ಮತ್ತು ಪೊಲೀಸರು ತೀವ್ರವಾಗಿ ಶೋಧನೆ ನಡೆಸಿದ್ದಾರೆ. ಜನತೆ ಯಾವುದೇ ಆತಂಕಕ್ಕೊಳಗಾಗದೇ ದೈನಂದಿನ ಕೆಲಸದಲ್ಲಿ ತೊಡಗಬೇಕು ಎಂದು ಬಿದರಿ ಮನವಿ ಮಾಡಿಕೊಂಡಿದ್ದಾರೆ.
ಸ್ಫೋಟಕ್ಕಾಗಿ ಟೈಮರ್‌ಗಳನ್ನು ಬಳಸಲಾಗಿದೆ. ಸ್ಫೋಟಗಳ ಹಿಂದೆ ಯಾವ ಸಂಘಟನೆಯ ಕೈವಾಡವಿದೆ ಎಂದು ಇನ್ನೂ ತಿಳಿದುಬಂದಿಲ್ಲ. ಸ್ಫೋಟದಿಂದ ತೀವ್ರ ಆಘಾತಕ್ಕೊಳಗಾಗಿರುವ ಜನತೆ ಕಚೇರಿ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದಾರೆ. ಅನೇಕ ಸ್ಥಳಗಳಲ್ಲಿ ಜನ ನೆರೆದಿರುವುದರಿಂದ ವಾಹನ ದಟ್ಟಣೆ ತಲೆದೋರಿದೆ.
ಎಲ್ಲೆಲ್ಲಿ ಸ್ಫೋಟ : ಫೋರಂ ಬಳಿಯ ಮಡಿವಾಳ ಚೆಕ್ ಪೋಸ್ಟ್, ಮೈಸೂರು ರಸ್ತೆಯ ನಾಯಂಡಹಳ್ಳಿ ಬಳಿಯ ಪಂತರ ಪಾಳ್ಯ, ಹೊಸೂರು ರಸ್ತೆಯಲ್ಲಿರುವ ಆಡುಗೋಡಿ, ಮಲ್ಯ ಆಸ್ಪತ್ರೆ ಬಳಿಯ ಪಾರ್ಕ್‌ನಲ್ಲಿ ಹಾಗೂ ಲ್ಯಾಂಗ್‌ಪೋರ್ಡ್ ರಸ್ತೆಯ ಶೋರೂಂ ಬಳಿ ಸ್ಪೋಟಗೊಂಡಿದ್ದು, ಓರ್ವ ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇಪ್ಪತ್ತಿಪ್ಪತ್ತು ನಿಮಿಷಗಳ ಅಂತರದಲ್ಲಿ ಐದು ಕಡೆ ಸ್ಪೋಟಗೊಂಡಿರುವುದರಿಂದ ಇದು ಯೋಜಿತ ಕೃತ್ಯ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಪೋಟದ ಹಿನ್ನಲೆಯಲ್ಲಿ ಮಹಾನಗರದ ಜನತೆಯಲ್ಲಿ ತಲ್ಲಣ ಉಂಟು ಮಾಡಿದೆ. ಸ್ಪೋಟ ನಡೆದ ಸ್ಥಳದಲ್ಲಿ ಆತಂಕದ ಹಾಗೂ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಮೈಸೂರು ರಸ್ತೆಯ ನಾಯಂಡಹಳ್ಳಿ ಬಳಿ ಸುಮಾರು 1.50ಕ್ಕೆ ಮೋರಿಯಲ್ಲಿ ಇಡಲಾಗಿದ್ದ ಬಾಂಬ್ ಸ್ಪೋಟಗೊಂಡಿದೆ. ಸ್ಪೋಟದಿಂದ ಅಲ್ಲಿ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ. ಆದರೆ ಸ್ಪೋಟ ತೀವ್ರ ಹೆಚ್ಚಾಗಿದ್ದು, ಭೀಕರ ಶಬ್ಧ ಕೇಳಿ ಬಂದಿತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ ಶಿವಾಜಿನಗರ ಮತ್ತು ರಿಚ್ಮಂಡ್ ರಸ್ತೆಯಲ್ಲಿಯೂ ಸ್ಫೋಟ ಸಂಭವಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications