ಬೆಂಗಳೂರಿಗರಿಗೆ ಇಂದು ಕರಾಳ ಶುಕ್ರವಾರ
ಬೆಂಗಳೂರು, ಜು. 25 : ಬೆಂಗಳೂರಿಗರಿಗೆ ಇಂದು ಕರಾಳ ಶುಕ್ರವಾರ. ನಗರದಲ್ಲಿ ಆರು ಸ್ಥಳಗಳಲ್ಲಿ ಏಳು ಕಡೆ ಸ್ಫೋಟಗೊಂಡಿದ್ದು ಬೆಂಗಳೂರಿನ ಜನತೆಯನ್ನು ಆತಂಕಕ್ಕೆಡೆ ಮಾಡಿದೆ. ಪ್ರಶಾಂತವಾದ ಬೆಂಗಳೂರಿನ ಶಾಂತಿಯನ್ನು ಕದಡಲು ದುಷ್ಕರ್ಮಿಗಳು ಸ್ಫೋಟಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಡಿವಾಳ ಚೆಕ್ ಪೋಸ್ಟ್ ಬಳಿ ಸಂಭವಿಸಿದ ಸ್ಫೋಟದಲ್ಲಿ ಲಕ್ಷ್ಮಿ ಎನ್ನುವ 65 ವಯಸ್ಸಿನ ಮಹಿಳೆ ಸ್ಥಳದಲ್ಲಿಯೇ ಸತ್ತಿದ್ದಾರೆ. ರವಿ, ಮುನಿಯಾ ಎಂಬಿಬ್ಬರು ಸೇರಿ ಆರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಹುಜಿ ಕೈವಾಡ ? : ಸ್ಫೋಟ ನಡೆದ ಎಲ್ಲ ಸ್ಥಳಗಳಿಗೆ ಶ್ವಾನದಳವನ್ನು ಕರೆಸಲಾಗಿದೆ ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಮಾಹಿತಿಯ ಹುಡುಕಾಟಕ್ಕೆ ತೊಡಗಿವೆ. ಏಳು ಸ್ಫೋಟಗಳು ಸಂಭವಿಸಿದ್ದರೂ ಸ್ಫೋಟದ ಪ್ರಮಾಣ ಕಡಿಮೆಯಿರುವುದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಸರಣಿ ಸ್ಫೋಟಗಳ ಹಿಂದೆ ಭಯೋತ್ಪಾದಕ ಸಂಘಟನೆಗಳಾದ ಸಿಮಿ ಅಥವಾ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಕೈವಾಡ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಾಫ್ಟ್‌ವೇರ್ ಕಂಪನಿಗಳು ಹೆಚ್ಚಾಗಿರುವ ಹೊಸೂರು ರಸ್ತೆಯನ್ನು ಗುರಿಯಾಗಿಸಿಕೊಂಡು ಸ್ಫೋಟಗೊಳಿಸಲಾಗಿದೆ ಎನ್ನಲಾಗಿದೆ. ಇನ್ಫೋಸಿಸ್, ವಿಪ್ರೋ ಸೇರಿದಂತೆ ಬೃಹತ್ ಸಾಫ್ಟ್‌ವೇರ್ ಕಂಪನಿಗಳು, ವಿಧಾನಸೌಧ, ಹೈಕೋರ್ಟ್, ಇಸ್ಕಾನ್ ಮೊದಲಾದ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ನಗರಾದ್ಯಂತ ಎಲ್ಲ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು ಮತ್ತು ತಮಿಳುನಾಡನ್ನು ಸಂಪರ್ಕಿಸುವ ಹೊಸೂರು ರಸ್ತೆಯ ಮೇಲೆ ಹೆಚ್ಚಿನ ಹಾನಿ ಸಂಭವಿಸಿದೆ. ಈ ಪ್ರದೇಶಗಳಲ್ಲಿ ತಮಿಳು ಮತ್ತು ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಅಂಗಡಿ ಮುಂಗಟ್ಟುಗಳ ಗಾಜುಗಳು ಒಡೆದು ಚೂರಾಗಿವೆ, ಚರಂಡಿ ಗೋಡೆಗಳಿಗೆ ಹಾನಿ ಸಂಭವಿಸಿದೆ. ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಹೊಸೂರು ರಸ್ತೆಯಲ್ಲಿರುವ ಎಲ್ಲ ಐಟಿ ಕಂಪನಿಗಳು ಮುಚ್ಚುತ್ತಿದ್ದು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಜನರಲ್ಲಿ ಆತಂಕ ತಂದಿದ್ದರೂ ಈ ಸ್ಥಳಗಳಲ್ಲಿ ಕುತೂಹಲದಿಂದ ಜನ ಜಮಾಯಿಸಿರುವುದರಿಂದ ತೀವ್ರ ವಾಹನ ದಟ್ಟಣೆ ಸಂಭವಿಸಿದೆ ಮತ್ತು ಪೊಲೀಸರಿಗೆ ತನಿಖೆ ಕೈಗೊಳ್ಳಲು ಅಡ್ಡಿಯಾಗುತ್ತದೆ.
ಸ್ಫೋಟಕ್ಕೆ ಯುರಿಯಾ, ಜಿಲೆಟಿನ್, ಸುಧಾರಿತ ಸ್ಫೋಟಕ ಸಾಧನಗಳನ್ನು ನೆಲದಲ್ಲಿ ಹುದುಗಿಸಿಟ್ಟು ಮೊಬೈಲ್ ಮತ್ತು ಟೈಮರ್ ಮೂಲಕ ಸ್ಫೋಟಗೊಳಿಸಲಾಗಿದೆ. ಬೆಂಗಳೂರಿನ ಜನರಿಗೆ ಇಂಥ ಸ್ಫೋಟಗಳು ಗೊತ್ತಿಲ್ಲ ಎನ್ನಬಹುದು. 1993ರಲ್ಲಿ ಬೆಂಗಳೂರಿನಲ್ಲಿ ಇಂಥಹದೇ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು.
(ದಟ್ಸ್ ಕನ್ನಡವಾರ್ತೆ)
ಮತ್ತಷ್ಟು ಸುದ್ದಿಗಳು
ಸ್ಪೋಟಗಳ ಹಿಂದೆ ಭಯೋತ್ಪಾದಕರ ಕೈವಾಡ :ಬಿದರಿ
ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ












Click it and Unblock the Notifications